ದಾವಣಗೆರೆ: ಮಹಾನಗರ ಪಾಲಿಕೆಯ 21ನೇ ಅವಧಿಗೆ ಮೇಯರ್, ಉಪಮೇಯರ್ ಹಾಗೂ ನಾಲ್ಕು ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆಗೆ ನಾಳೆ ಬೆಳಗ್ಗೆ 11.30 ಕ್ಕೆ ಚುನಾವಣೆ ನಡೆಯಲಿದೆ.
ತರಾತುರಿಯಲ್ಲಿ ಬಾಡಿಗೆ ಕರಾರು ಪತ್ರ ತಯಾರಿಸಿ ವಾಸವಿಲ್ಲದಿದ್ದರೂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಥಳೀಯರಲ್ಲದಿದ್ದರೂ 12 ಎಂಎಲ್ ಸಿ ಗಳಿಗೆ ಮತದಾನದ ಹಕ್ಕು ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಸುಧಾ ಹಾಗೂ ಇತರರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲ ಪಾಲಿಕೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಹೆಸರು ಸೇರ್ಪಡೆ ಮಾಡಲಾಗಿದ್ದು, ಇವರು ಸ್ಥಳೀಯರಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಚುನಾವಣೆಗೆ ತಡೆ ನೀಡಿಲ್ಲ. ಫೆಬ್ರವರಿ ೨೪ ಕ್ಕೆ ವಿಚಾರಣೆ ಮುಂದೂಡಿದೆ. ಇನ್ನು ಈ ಬಗ್ಗೆ ಹೈಕೋರ್ಟ್ ನೀಡುವ ತೀರ್ಪು ಮುಖ್ಯವಾಗಲಿದೆ ಎಂದು ಆದೇಶಿಸಲಾಗಿದೆ. ಇನ್ನು ಅಕ್ರಮವಾಗಿ ಮತದಾನದ ಗುರುತಿನ ಚೀಟಿ ಪಡೆದ ಆರೋಪ ಎದುರಿಸುತ್ತಿದ್ದ 12 ಎಂಎಲ್ಸಿಗಳಿಗೆ ಮತದಾನದ ಹಕ್ಕು ನೀಡಲಾಗಿದೆ. ಬೆಂಗಳೂರು ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ ಎಂಎಲ್ ಸಿ ಗಳ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಯಾರೂ ವಾಸವಿಲ್ಲದ್ದು, ಅಕ್ರಮವಾಗಿ ಹೆಸರು ಸೇರಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದ್ರೂ ಅಂತಿಮವಾಗಿ ಜಿಲ್ಲಾಧಿಕಾರಿ ಮತದಾರರ ಪರಿಷ್ಕೃತ ಪಟ್ಟಿ ಸರಿಯಾಗಿದೆ ಎಂದು ಸಮರ್ಥಿಸಿ ಮತದಾನಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಬಲಾಬಲ ಏನು...? ಒಟ್ಟು 62 ಮತದಾರರಿದ್ದು, 45 ಪಾಲಿಕೆಯ ಸದಸ್ಯರು, ಬಿಜೆಪಿ ಶಾಸಕ ಎಸ್. ಎ. ರವೀಂದ್ರನಾಥ್, ಸಂಸದ ಸಿದ್ದೇಶ್ವರ್, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ, ಎಂಎಲ್ ಸಿಗಳಾದ ಮೋಹನ್ ಕೊಂಡಜ್ಜಿ, ಅಬ್ದುಲ್ ಜಬ್ಬಾರ್ ಸೇರಿದಂತೆ ೬೨ ಮಂದಿ ಮತ ಚಲಾಯಿಸಲಿದ್ದಾರೆ. ನಾಳೆ ನಡೆಯುವ ಮತದಾನ ತೀವ್ರ ಕುತೂಹಲ ಕೆರಳಿಸಿದ್ದು, ಪಾಲಿಕೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.