ದಾವಣಗೆರೆ: ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಾಂಗ್ರೆಸ್ ಪಕ್ಷವು ಸೋನಿಯಾ, ರಾಹುಲ್ ಗಾಂಧಿ ಮೇಲೆ ಇಡಿ ತನಿಖೆ ಆಗಬಾರದು ಎಂದು ಹೋರಾಟ ಮಾಡುತ್ತಾ ಅಧಿಕಾರಿಗಳನ್ನು ಬ್ಲಾಕ್‌ಮೇಲ್ ಮಾಡಲು ಇಳಿದಿರೋದು ದೌರ್ಭಾಗ್ಯ ಎಂದು ಸಂಸದ ಹಾಗು ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದರು.
ದಾವಣಗೆರೆ ತಾಲೂಕಿನ ಹಳೇಬಿಸಲೇರಿ ಗ್ರಾಮದಲ್ಲಿ ಮಾತನಾಡುತ್ತಾ, ನ್ಯಾಯಾಂಗ ವ್ಯವಸ್ಥೆಯ ಮೇಲೆ ಭರವಸೆ ಇದ್ದಿದ್ದರೆ ಕಾಂಗ್ರೆಸ್ ತನಿಖೆ ಎದುರಿಸಬೇಕಿತ್ತು. ರಾಜಕೀಯಪ್ರೇರಿತ ಪ್ರಕರಣಗಳನ್ನ ಈ ಹಿಂದೆ ಕಾಂಗ್ರೆಸ್ ಬಿಜೆಪಿ ಮೇಲೆ ದಾಖಲಿಸುತ್ತಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಒಬ್ಬರೇ ಹೋಗಿ ಸತತ 10 ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭ್ರಷ್ಟಾಚಾರ ಆಗಿರೋದು ಪ್ರಾಥಮಿಕ ಹಂತದಲ್ಲೇ ಕಂಡುಬರ್ತಿದ್ದು, ಭ್ರಷ್ಟಾಚಾರ ಮಾಡಿಲ್ಲ ಅಂದ್ರೆ ತನಿಖೆಗೆ ಒಳಗಾಗಿ, ಅದರಿಂದ ಹೊರಬನ್ನಿ ಎಂದರು. ಈ ದೇಶ ಗಾಂಧಿ ಕುಟುಂಬದ ದಿಕ್ಕಿನಲ್ಲಿ ನಡೆಯೋದಿಲ್ಲ, ಬದಲಾಗಿ ಸಂವಿಧಾನದ ಪ್ರಕಾರ ನಡೆಯುತ್ತಿದೆ. ಸಂವಿಧಾನದ ಮುಂದೆ ಎಲ್ಲರೂ ಸಮಾನರು. ಈ ತನಿಖೆಯ ದಿಕ್ಕು ತಪ್ಪಿಸಲು ಸಾವಿರಾರು ಜನರನ್ನು ಬೀದಿಗಿಳಿಸಿ ಪ್ರತಿಭಟನೆ ಮಾಡಿಸುತ್ತಿದೆ.
ಒಂದು ಕಾಲದಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತಿದ್ದ ಕಾಂಗ್ರೆಸ್ ಇದೀಗ ಕಾಂಗ್ರೆಸ್ ಯುವರಾಜನ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವುದು ದೌರ್ಬಾಗ್ಯ ಎಂದು ತೇಜಸ್ವಿ ಸೂರ್ಯ ಟೀಕಿಸಿದರು.
ಇದನ್ನೂ ಓದಿ: ಜಮೀನು ಬಿಟ್ಟುಕೊಡುವಂತೆ ಬಿಜೆಪಿ ಶಾಸಕರ ಕುಟುಂಬದ ಒತ್ತಡ ಆರೋಪ; ನಾಲ್ವರಿಂದ ವಿಷ ಸೇವನೆ