ದಾವಣಗೆರೆ: ಚನ್ನಗಿರಿ ತಾಲೂಕಿನ ದೊಡ್ಡಘಟ್ಟ ಗ್ರಾಮದ ಕೆ. ಜಿ. ಮರುಳಸಿದ್ದಪ್ಪ ಅವರಿಗೆ ಸೇರಿದ್ದ ಅಡಿಕೆ ಮರಗಳನ್ನ ಯಾರೋ ದುಷ್ಕರ್ಮಿಗಳು ರಾತ್ರೋ ರಾತ್ರಿ ಕಡಿದುಹಾಕಿದ್ದಾರೆ.
ಮರುಳಸಿದ್ದಪ್ಪ ನಾಲ್ಕು ಎಕರೆ ಜಮೀನಿನಲ್ಲಿ ಕಳೆದ ಐದು ವರ್ಷಗಳ ಹಿಂದೆ ಸಾವಿರಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ನೆಟ್ಟಿದ್ದರು. ಅವುಗಳ ಪೋಷಣೆ ಮಾಡಿಕೊಂಡು ಚೆನ್ನಾಗಿಯೇ ಬೆಳೆಸಿದ್ದರು. ಇನ್ನೆರಡು ವರ್ಷಗಳಲ್ಲಿ ಫಸಲು ಕೈಗೆ ಬರುತ್ತೆ. ಬೆಳೆಗೆ ಮಾಡಿದ ಸಾಲ ತೀರುತ್ತದೆ ಎಂಬ ಆಶಾಭಾವನೆ ಹೊಂದಿದ್ದರು. ಆದ್ರೆ ಸುಮಾರು 900 ಕ್ಕೂ ಹೆಚ್ಚು ಮರಗಳನ್ನ ರಾತ್ರಿ ವೇಳೆ ಬಂದ ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ.
ಗ್ರಾಮದಲ್ಲಿ ಮರುಳಸಿದ್ಧಪ್ಪರಿಗೆ ಒಳ್ಳೆಯ ಹೆಸರಿದೆ. ಆದರೂ ಈ ಕೃತ್ಯ ನಡೆಸಿರುವುದು ಯಾರು ಎಂಬುದು ಗೊತ್ತಾಗುತ್ತಿಲ್ಲ. ಈ ಗ್ರಾಮದವರೇ ಮರುಳಸಿದ್ದಪ್ಪ ಏಳಿಗೆ ಸಹಿಸದೇ ಈ ಕೃತ್ಯ ಎಸಗಿದ್ದಾರೆಯೇ ಅಥವಾ ಹೊರಗಿನವರ ದುಷ್ಕೃತ್ಯನಾ ಎಂಬ ಅನುಮಾನವೂ ಕಾಡುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಅಡಿಕೆ ಮರಗಳು ದ್ವೇಷಕ್ಕೆ ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಕಡೆಗಳಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಫಸಲಿಗೆ ಬಂದಿದ್ದ ಅಡಿಕೆ ಮರಗಳನ್ನು ಕಡಿದು ಹಾಕಿದ ಪ್ರಕರಣಗಳು ವರದಿಯಾಗಿವೆ.