ಹರಿಹರ: ತಾಲೂಕಿನಲ್ಲಿ ಶುಕ್ರವಾರ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಬಿಟ್ಟ ಸುಳ್ಳು ವಾಟ್ಸ್ಆ್ಯಪ್ ಮೆಸೇಜ್ನಿಂದ ನಿದ್ದೆಗೆಟ್ಟು ಇಡೀ ರಾತ್ರಿ ಮನೆ ಸ್ವಚ್ಛಗೊಳಿಸಿ ಬೆಳಗಿನ ಜಾವ 5 ಗಂಟೆಗೆ ಮಹಿಳೆಯರು ದೀಪ ಹಚ್ಚಿದ ಘಟನೆಗಳು ತಾಲೂಕಿನಲ್ಲಿ ನಡೆದಿವೆ.
ವಾಟ್ಸ್ಆ್ಯಪ್ ಮಸೇಜ್: ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದೇವಸ್ಥಾನದ ನಂದಾ ದೀಪ ಆರಿದೆ. ಹಾಗಾಗಿ ಎಲ್ಲರ ಮನೆ ಮುಂದೆ ದೀಪ ಹಚ್ಚಬೇಕು. ಹಚ್ಚಿದರೆ ಕೊರೊನಾ ರೋಗ ಹೊಗುತ್ತದೆ, ಒಳ್ಳೆಯದಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿಬಿಡಲಾಗಿದೆ. ಇದು ಕಾಡ್ಗಿಚ್ಚಿನಂತೆ ಹಬ್ಬಿ ತಾಲೂಕಿನ ಮನೆ ಮನೆಗಳಲ್ಲಿ ಶುಕ್ರವಾರ ಬೆಳಗಿನ ಜಾವ ಜನ ಮರಳೋ ಜಾತ್ರೆ ಮರಳೋ ಎನ್ನುವ ರೀತಿಯಲ್ಲಿ ಮಹಿಳೆಯರು ದೀಪ ಹಚ್ಚಿದ್ದಾರೆ.
ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರು ಮಂಜುನಾಥ ಸ್ವಾಮಿಯ ನಂದಾ ದೀಪ ಆರಿಲ್ಲ. ವಾಟ್ಸ್ಆ್ಯಪ್ ಮೆಸೇಜ್ ಸುಳ್ಳಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವದಲ್ಲಿ ಕೊರೊನಾ ವೈರಸ್ ರೋಗಾಣುವಿನ ಕ್ರೂರತೆ ಬಗ್ಗೆ ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದರೂ ಅರ್ಥ ಮಾಡಿಕೊಳ್ಳದ ಸಾರ್ವಜನಿಕರು ಈ ಸುಳ್ಳು ಸುದ್ದಿಯನ್ನು ನಂಬಿ ನಿದ್ದೆಗೆಡುವುದನ್ನು ನೋಡಿದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಕಿಡಿಗೇಡಿಗಳು ಹರಿಬಿಡುವ ಸುದ್ದಿ ಎಷ್ಟು ನಂಬುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ.