ದಾವಣಗೆರೆ: ಯುದ್ಧಭೂಮಿಯಲ್ಲಿ ಭಾರತೀಯ ಸೈನಿಕರಿಗೆ ಭಯ, ಆತಂಕ ಇರಲ್ಲ. ಇದ್ದರೆ ಶತ್ರುಗಳ ವಿರುದ್ಧ ಹೋರಾಡಲು ಆಗದು. ಮನೆ ಮಠ ಸೇರಿ ಯಾವುದೂ ನೆನಪಿಗೆ ಬರಲ್ಲ. ಆಗ ಏನಿದ್ದರೂ ದೇಶಪ್ರೇಮ, ದೇಶಕ್ಕಾಗಿ ಹೋರಾಡಬೇಕೆಂಬ ಕೆಚ್ಚೆದೆ ಮಾತ್ರ ಇರುತ್ತೆ. ಯುದ್ಧದ ವೇಳೆ ನಾವು ಮುಂದೆ ಮುಂದೆ ಹೋಗುತ್ತಾ ಶತ್ರುಗಳನ್ನು ಹಿಮ್ಮೆಟ್ಟಿಸುತ್ತೇವೆ. ನಮ್ಮ ಮೇಲೂ ಅಟ್ಯಾಕ್ ಆಗಿದೆ. ಆದ್ರೂ ತಪ್ಪಿಸಿಕೊಂಡು ಹೋರಾಡಿದೆವು. ಇದರ ಫಲವಾಗಿಯೇ ಪಾಕಿಸ್ತಾನದ ಕಪಿಮುಷ್ಠಿಯಿಂದ " ಟೈಗರ್ ಹಿಲ್" ಭಾರತಕ್ಕೆ ಮರಳಿ ಪಡೆಯಲು ಸಾಧ್ಯವಾಯ್ತು.
ಇದು ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ದಾವಣಗೆರೆಯ ಎಲೆಬೇತೂರು ರಸ್ತೆಯಲ್ಲಿ ವಾಸವಾಗಿರುವ ನಿವೃತ್ತ ಯೋಧ ಎನ್ ಎಂ ಬಸಪ್ಪ ಅವರ ಮಾತುಗಳು. 1999ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ನಡೆದ ರೋಚಕ ಕಹಾನಿಯನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ. 1999ರ ಮೇ ತಿಂಗಳಿನಲ್ಲಿ ಕಾರ್ಗಿಲ್ ಯುದ್ಧದ ಸುಳಿವು ಸಿಕ್ಕಿತ್ತು. ಪಾಕಿಸ್ತಾನದ ಉಗ್ರರು ಸೋಪುರದಲ್ಲಿ ಜನರ ಪ್ರಾಣ ತೆಗೆಯುತ್ತಿದ್ದರು. ಈ ಕೃತ್ಯಕ್ಕೆ ಪಾಕ್ ಸೇನೆ ಬೆಂಬಲ ನೀಡಿತ್ತು.
ಅದೇ ತಿಂಗಳ ಅಂತ್ಯದಲ್ಲಿ ಕಾರ್ಗಿಲ್ ಯುದ್ಧ ಪ್ರಾರಂಭವಾಯಿತು. ಕಾಶ್ಮೀರದ ತಂಗುದಾರ್ ಪ್ರದೇಶದಲ್ಲಿ ಕೆಲಸ ನಿರ್ವಹಿಸುವಾಗ ನಮ್ಮ ಬೆಟಾಲಿಯನ್ಗೆ ಬುಲಾವ್ ಬಂತು. ಎಲ್ಲಾ ಸೈನಿಕರು ಯುದ್ಧಕ್ಕೆ ಸಿದ್ಧರಾದೆವು. ಏರ್ ಅಟ್ಯಾಕ್, ಆರ್ಟಿ ಫೈರಿಂಗ್ ಹಗಲಲ್ಲಿ ನಡೆಯುತ್ತಿತ್ತು. ರಾತ್ರಿ ವೇಳೆಯೇ ಹೆಚ್ಚಾಗಿ ಪಾಕ್ ಸೈನಿಕರು ಫೈರಿಂಗ್ ಮಾಡುತ್ತಿದ್ದರು. ಅವರಿಂದ ಬರುತ್ತಿದ್ದ ಗುಂಡಿನ ದಾಳಿ ಎದುರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ಅತ್ಯಾಧುನಿಕ ಶಸ್ತ್ರಾಸ್ತ್ರಗಳೂ ಇರಲಿಲ್ಲ. ವೀರಾವೇಷದಿಂದ ಹೋರಾಡಿದೆವು. 2,600 ಮಂದಿ ವೀರ ಮರಣ ಹೊಂದಿದರು ಎಂದಿದ್ದಾರೆ ನಿವೃತ್ತ ಯೋಧ.
ಇದಲ್ಲದೆ 1999ರ ಮೇ ತಿಂಗಳ ಅಂತ್ಯದಿಂದ ಜುಲೈ 26ರವರೆಗೆ ನಡೆದ ಕಾರ್ಗಿಲ್ ಯುದ್ಧ ಪೂರ್ವಯೋಜಿತವಾಗಿರಲಿಲ್ಲ. ಅಚಾನಕ್ ಆಗಿ ನಡೆದ ವಾರ್ನಿಂದಾಗಿ ಯೋಧರು ಹುತಾತ್ಮರಾಗಬೇಕಾಯಿತು. ಸರಿಯಾದ ಪ್ಲಾನಿಂಗ್ ಮಾಡಿರಲಿಲ್ಲ. ಆದ್ದರಿಂದಲೇ ಹೆಚ್ಚಿನ ಸಾವು-ನೋವು ಸಂಭವಿಸಿತು ಎಂದರು.
ಪಾಕ್ ಉಗ್ರರು ಹಾಗೂ ಸೇನೆಯಿಂದ ಬರುತ್ತಿದ್ದ ಏರ್ ಅಟ್ಯಾಕ್ ವೇಳೆ ಪ್ಲೇಟ್ ಫೈರ್ ಮಾಡುವ ವಿಭಾಗದಲ್ಲಿ ಕೆಲಸ ಮಾಡಿದೆ. ಒಂದೆಡೆ ದಾಳಿಗಳು ಮತ್ತೊಂದೆಡೆ ಶತ್ರುಗಳ ಒಳನುಸುಳುವಿಕೆ ತಡೆ ಒಡ್ಡಬೇಕಿತ್ತು. ಗಾಳಿ, ಹಿಮ, ಚಳಿ ಸೇರಿ ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿ ಹೋರಾಡಿದೆವು. ಇದೆಲ್ಲದರ ಪರಿಣಾಮವಾಗಿ ಜುಲೈ 26ರಂದು ಕಾರ್ಗಿಲ್ ಯುದ್ಧದಲ್ಲಿ ಭಾರತ ವಿಜಯಶಾಲಿಯಾಯಿತು ಅನ್ನೋದು ಸುಬೇದಾರ್ ಆಗಿ ಕಾರ್ಯನಿರ್ವಹಿಸಿದ್ದ ಬಸಪ್ಪರ ಮನದಾಳದ ಮಾತು.
ನನ್ನ ಮೇಲೆಯೂ ಅಟ್ಯಾಕ್ ಆಗಿತ್ತು: ಯುದ್ಧದ ವೇಳೆ ಪಾಕ್ನ ಸೈನಿಕರು ಹಾಗೂ ಉಗ್ರರು ನಾನಿದ್ದ ಬೆಟಾಲಿಯನ್ ಮೇಲೆ ಪೆಟ್ರೋಲಿಯಂ ಅಟ್ಯಾಕ್ ಮಾಡಿದರು. ಆಗ ನಾನು ತಪ್ಪಿಸಿಕೊಂಡೆ. ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡಿದೆವು. ಕೆಲವೊಮ್ಮೆ ಎರಡು ದಿನಗಳ ಕಾಲ ಊಟವೂ ಇರುತ್ತಿರಲಿಲ್ಲ. ನಮಗೆ ಮೊದಲೇ ತರಬೇತಿ ನೀಡಲಾಗಿತ್ತು.
ಸುಮಾರು 42 ದಿನಗಳ ಯುದ್ಧದಲ್ಲಿ ಪಾಕ್ ಸೋಲಿಸುವ ಮೂಲಕ ಶತ್ರುರಾಷ್ಟ್ರದ ವಶದಲ್ಲಿದ್ದ 'ಟೈಗರ್ ಹಿಲ್'ನ ಭಾರತ ಮತ್ತೆ ಪಡೆಯುವಲ್ಲಿ ಯಶಸ್ವಿ ಆಯ್ತು. ಇದಕ್ಕೆಲ್ಲಾ ಭಾರತೀಯ ಸೇನೆಯ ಕೆಚ್ಚೆದೆ ಹೋರಾಟ ಕಾರಣ ಎಂದು ಬಸಪ್ಪ ಹೇಳಿದ್ದಾರೆ.