ದಾವಣಗೆರೆ: ಎರಡನೇ ಅವಧಿಗೆ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯಲು ಬಿಜೆಪಿ - ಕಾಂಗ್ರೆಸ್ ನಡುವೆ ಗುದ್ದಾಟ ಆರಂಭವಾಗಿದೆ. ಸಮಬಲ ಹೊಂದಿರುವ ಕಾಂಗ್ರೆಸ್ - ಬಿಜೆಪಿ ಹಲವು ತಂತ್ರ ಪ್ರತಿತಂತ್ರಗಳನ್ನು ಮಾಡಿದ್ದು, ಈ ಬಾರಿಯೂ ಸಹ ಗದ್ದುಗೆ ಹಿಡಿಯಲು ಆಡಳಿತ ಹಾಗೂ ವಿರೋಧ ಪಕ್ಷಗಳಿಂದ ಎರಡು ವಾರ ಮುಂಚೆಯೇ ಕಿತ್ತಾಟ ಶುರುವಾಗಿದೆ. ಪಾಲಿಕೆಗೆ ಬಂದ ಜನಸಾಮಾನ್ಯರ ಮುಂದೆ ಎರಡು ಪಕ್ಷಗಳಿಂದ ಹೈಡ್ರಾಮವೇ ನಡೆದು ಹೋಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ - ಬಿಜೆಪಿ ಸಮಬಲ ಸಾಧಿಸಿದ್ದೇ ಈ ಕಿತ್ತಾಟಕ್ಕೆ ಮುನ್ನುಡಿಯಾಗಿದೆ. 2019 ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1, ಪಕ್ಷೇತರ 5 ಮಂದಿ ಗೆದ್ದಿದ್ದರು. ಈ ವೇಳೆ, ನಾಲ್ವರು ಪಕ್ಷೇತರ ಬೆಂಬಲ ಪಡೆದು ಬಿಜೆಪಿ 21ಕ್ಕೆ ಸ್ಥಾನ ಏರಿಕೆ ಮಾಡಿಕೊಂಡು ಬಳಿಕ ಫೆಬ್ರವರಿಯಲ್ಲಿ ನಡೆದ ಮೇಯರ್ ಚುನಾವಣೆಯಲ್ಲಿ ಹೊರ ಜಿಲ್ಲೆಯ ಎಂಎಲ್ಸಿ ಅವರನ್ನು ಇಲ್ಲಿ ಮತಪಟ್ಟಿಗೆ ಸೇರಿಸಿದ್ದು, ಕಾಂಗ್ರೆಸ್ನ ಮೂರು ಜನ ಸದ್ಯಸ್ಯರು ಗೈರಾದ ಹಿನ್ನೆಲೆ ಮೇಯರ್ ಗದ್ದುಗೆಗೆ ಬಿಜೆಪಿ ಏರಿತ್ತು. ಈಗ ಎರಡನೇ ಅವಧಿಗೆ ಮೇಯರ್ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಾಗಿದ್ದು, ಈಗಲೂ ಕೂಡ ಬಿಜೆಪಿ ವಾಮಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟಿದ್ದು, ಮತ್ತೆ ಬೇರೆ ಜಿಲ್ಲೆಯ ಎಂಎಲ್ಸಿಗಳ ಸೇರ್ಪಡೆಗೆ ಮುಂದಾಗಿದೆ.
ರಾಣೆಬೆನ್ನೂರಿನ ಸಚಿವ ಆರ್ ಶಂಕರ್ ಎಂಎಲ್ಸಿ ಚಿದಾನಂದಗೌಡರನ್ನು ಸೇರ್ಪಡೆ ಮಾಡಿದ್ದಾರೆ. ಅಧಿಕಾರದ ಚುಕ್ಕಣಿ ಹಿಡಿಯಲು ಮತ್ತೆ ವಾಮಾಮಾರ್ಗ ಹಿಡಿಯುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿ ಪಾಲಿಕೆ ಒಳಗೆ ದೊಡ್ಡ ಹೈಡ್ರಾಮವನ್ನೇ ಸೃಷ್ಟಿ ಮಾಡಿತ್ತು.
ಪಾಲಿಕೆಯ ಒಟ್ಟು ಬಲಾಬಲ...!
ಇನ್ನು ಪಾಲಿಕೆ ಬಲಾಬಲ ನೋಡೋದಾದರೆ ನಾಲ್ವರು ಪಕ್ಷೇತರ ಅಭ್ಯರ್ಥಿ ಸೇರಿ ಬಿಜೆಪಿ 21, ಓರ್ವ ಅಭ್ಯರ್ಥಿ ರಾಜೀನಾಮೆ ಬಳಿಕ ಕಾಂಗ್ರೆಸ್ 21, ಓರ್ವ ಜೆಡಿಎಸ್ ಮಹಿಳಾ ಅಭ್ಯರ್ಥಿ, ಓರ್ವ ಪಕ್ಷೇತರ(ಕಾಂಗ್ರೆಸ್ ಬಂಡಾಯ)ಅಭ್ಯರ್ಥಿ ಇದ್ದಾರೆ. ಇದಕ್ಕೆ ಸೇರ್ಪಡೆಯಾಗಿ ಬಿಜೆಪಿ ಸಂಸದ, ಎಂಎಲ್ಎ, ಹಾಗೂ ಎಂಎಲ್ ಸಿಗಳಾದ ಲೆಹರ್ ಸಿಂಗ್, ತೇಜಸ್ವಿನಿ ಗೌಡ, ಹನುಮಂತ್ ನಿರಾಣಿ, ರವಿಕುಮಾರ್ ಸೇರಿ ಒಟ್ಟು 10 ಮಂದಿ ಮತದಾನಕ್ಕೆ ಸೇರ್ಪಡೆಯಾಗಿ, ಒಟ್ಟು 21 ಸ್ಥಾನದಲ್ಲಿ ಸುಲಭವಾಗಿ ಅಧಿಕಾರ ಹಿಡಿಯಲು ಬಿಜೆಪಿ ತಂತ್ರಗಾರಿಕೆ ಮಾಡಿದೆ.
ಇನ್ನು ಕಾಂಗ್ರೆಸ್ನ 21 ಪಾಲಿಕೆ ಸದಸ್ಯರು, ಓರ್ವ ಶಾಸಕ, ಎಂಎಲ್ಸಿ, ಓರ್ವ ಪಕ್ಷೇತರ ಅಥವಾ ಓರ್ವ ಜೆಡಿಎಸ್ ಸೇರಿ 27 ಸದಸ್ಯರು ಆಗುತ್ತಾರೆ. ಈ ಹಿನ್ನೆಲೆ ಕಾಂಗ್ರೆಸ್ ಹೋರಾಟಕ್ಕೆ ಮುಂದಾಗಿದ್ದು ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಹಿಡಿಯಲು ಹೊರಟಿದೆ ಎಂದು ಆರೋಪಿಸಿದೆ.
ಮತದಾರರ ಪಟ್ಟಿಯಲ್ಲಿ ಸೇರಿಸಿರೋದೇ ಗೊತ್ತಿಲ್ಲ...!
ಇನ್ನು ದಾವಣಗೆರೆ ನಗರದಲ್ಲಿ ವಾಸವೇ ಇಲ್ಲದ ಸಚಿವ ಆರ್ ಶಂಕರ್, ಎಂಎಲ್ಸಿ ಚಿದಾನಂದಗೌಡ ಅವರ ನಕಲಿ ವಿಳಾಸ ನೀಡಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗಿದೆ. ಕಾಂಗ್ರೆಸ್ ಪಾಲಿಕೆ ಸದಸ್ಯರು ಸಚಿವ ಆರ್ ಶಂಕರ್ ನೀಡಿದ್ದ ವಿಳಾಸಕ್ಕೆ ಹೋಗಿ ನೋಡಿದ್ರೆ ಅಲ್ಲಿ ಸಚಿವರೇ ಇಲ್ಲ. ಇನ್ನು ಅವರಿಗೆ ಕರೆ ಮಾಡಿ ಕೇಳಿದ್ರೆ, ಇಲ್ಲ ನನ್ನನ್ನು ಮತದಾರರ ಪಟ್ಟಿಗೆ ಸೇರಿಸಿರೋದೇ ಗೊತ್ತಿಲ್ಲ, ನಾನು ಸೆಷನ್ನಲ್ಲಿ ಇದ್ದೇನೆ, ಎಂದು ಕರೆ ಕಟ್ ಮಾಡಿದ್ದಾರೆ. ಆದರೆ, ಮನೆ ಮಾಲೀಕರು ಮಾತ್ರ ಅವರು ಇಲ್ಲಿ ಬಂದು ಮನೆ ನೋಡಿಕೊಂಡು ಅಗ್ರಿಮೆಂಟ್ ಮಾಡಿಕೊಂಡು ಹೋಗಿದ್ದಾರೆ. ಇದೇ ತಿಂಗಳು ಮನೆಗೆ ಬಾಡಿಗೆಗೆ ಬರ್ತಾರೆ ಎಂದು ಡ್ರಾಮಾ ಮಾಡಿದ್ದಾರೆ.
ಒಟ್ಟಿನಲ್ಲಿ ಬೆಣ್ಣೆನಗರಿ ಪಾಲಿಕೆ ಗದ್ದುಗೆ ಹಿಡಿಯಲು ಪ್ರತಿ ವರ್ಷದಂತೆ ಕಿತ್ತಾಟದ ಜೊತೆಗೆ ತಂತ್ರ ಪ್ರತಿತಂತ್ರ ನಡೆಯುತ್ತಿದೆ. ಇದರ ಜೊತೆಗೆ ನೂತನ ಸಚಿವರು ಹಾಗೂ ಎಂಎಲ್ಸಿಗಳು ಈ ಹೈಡ್ರಾಮಕ್ಕೆ ಸೇರ್ಪಡೆಯಾಗಿದ್ದು, ಅವರಿಗೆ ಮತದಾನ ಹಕ್ಕು ಸಿಗುತ್ತಾ ಅಥವಾ ರದ್ದಾಗುತ್ತಾ ಅನ್ನೊ ರೋಚಕತೆ ಫೆಬ್ರುವರಿ 17ರ ವರೆಗೆ ಮುಂದುವರಿಯುವುದಂತೂ ಸತ್ಯ.