ದಾವಣಗೆರೆ:" ನನ್ನನ್ನು ಕೊಲ್ಲಲು ಬೆಂಗಳೂರು ಮೂಲದವರಿಗೆ ಕಳೆದ ಮೂರು ತಿಂಗಳ ಹಿಂದೆಯೇ ಸುಪಾರಿ ನೀಡಲಾಗಿತ್ತು. ಆದರೆ, ಲಾಕ್ಡೌನ್ ಇದ್ದ ಕಾರಣ ನನ್ನ ಜೀವ ಉಳಿದಿದೆ. ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದೇನೆ' ಎಂದು ಹರಿಹರ ಜೆಡಿಎಸ್ ಮಾಜಿ ಶಾಸಕ ಹೆಚ್. ಎಸ್.ಶಿವಶಂಕರ್ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಂದಿ ಕನ್ ಸ್ಟ್ರಕ್ಷನ್ ಮಾಲೀಕ ಹಾಗೂ ಹರಿಹರ ತಾಲೂಕಿನ ಹಳೇ ಹರ್ಲಾಪುರದ ಮಂಜುನಾಥ, ರೌಡಿಶೀಟರ್ ಗಳಾದ ವಿನಯ್, ರಾಕೇಶ್ ನನ್ನ ಕೊಲೆಗೆ ಸಂಚು ರೂಪಿಸಿದವರು. ಈ ಮೂವರ ವಿರುದ್ಧ ಹರಿಹರ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಈ ಬಗ್ಗೆ ಎಸ್ಪಿ ಹನುಮಂತರಾಯ ಅವರಿಗೆ ದೂರು ಕೊಟ್ಟ ಕಾರಣ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದರು.
ಹಣದ ಅತಿಯಾಸೆಯಿಂದ ನನ್ನ ಜೊತೆ ಜೆಡಿಎಸ್ ನಲ್ಲೇ ಇದ್ದ ಮಂಜುನಾಥ ಕಿರ್ಲೋಸ್ಕರ್ ಕಂಪನಿಯ ಜಾಗ ಖರೀದಿ ಮಾಡಿದವರ ಜೊತೆ ಹೋಗಿದ್ದಾನೆ. ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ. ಅಲ್ಲದೇ, ನನ್ನನ್ನು ಕೊಲ್ಲಲು ಪಿಸ್ತೂಲ್, ಮಾರಾಕಾಸ್ತ್ರಗಳು, ಸೈನೈಡ್ ಬಗ್ಗೆ ವಿಚಾರಿಸಿದ್ದ. ಸುಪಾರಿ ನೀಡಿರುವ ಹಾಗೂ ಎಲ್ಲ ಬೆಳವಣಿಗೆಗಳ ಆಡಿಯೋ ರೆಕಾರ್ಡ್ ಕೇಳಿದಾಗ ಆಘಾತ ಆಯಿತು ಎಂದು ಹೇಳಿದ್ದಾರೆ.
ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ....?
ಗ್ರೀನ್ ಸಿಟಿ ಹರಿಹರ ಅಭಿವೃದ್ಧಿಪಡಿಸಲು ಕಾಮಗಾರಿ ಕಾಂಟ್ರಾಕ್ಟ್ ಪಡೆದಿರುವ ನಂದಿ ಕನ್ ಸ್ಟ್ರಕ್ಷನ್ ಮಾಲೀಕ ಮಂಜುನಾಥ್ ನನಗೆ ಪರಿಚಿತ. ಈ ಹಿಂದೆ ನಮ್ಮೊಂದಿಗೆ ಇದ್ದದ್ದು ನಿಜ. ತದನಂತರ ರಾಜಕೀಯ ಸ್ಥಿತ್ಯಂತರದಲ್ಲಿ ಅವರು ನಮ್ಮನ್ನು ಬಿಟ್ಟು ಬೇರೆ ಪಕ್ಷದೊಂದಿಗೆ ಕೂಡಿಕೊಂಡು ಚುನಾವಣೆ ನಡೆಸಿದ್ದರು. ತದನಂತರದಲ್ಲಿ ಗ್ರೀನ್ ಸಿಟಿಯ ಅಭಿವೃದ್ಧಿ ಬಗ್ಗೆ ಗಮನಿಸಿದಾಗ ಕಾನೂನು ರೀತಿಯಲ್ಲಿ ಯಾವುದೇ ಇಲಾಖೆಗಳಿಂದ ಅನುಮೋದನೆ ಪಡೆಯದೇ ಕಾಮಗಾರಿಗಳನ್ನು ಕೈಗೊಂಡಿದ್ದು, ನನ್ನ ಗಮನಕ್ಕೆ ಬಂದಿತ್ತು.
ಈ ಸಂಬಂಧ ವಿವಿಧ ಇಲಾಖೆಗಳಿಗೆ ದೂರು ಕೊಟ್ಟಿದ್ದೆ. ಕೆಲ ಇಲಾಖೆಗಳು ಕಾಮಗಾರಿಗಳನ್ನು ತಡೆಹಿಡಿದಿತ್ತು. ಹಾಕಿರುವ ಬಂಡವಾಳಕ್ಕೆ ತೊಂದರೆಯಾಗುತ್ತೆ ಎಂಬ ಕಾರಣಕ್ಕೆ ನನ್ನನ್ನು ಕೊಲೆ ಮಾಡಿದರೆ ಕೆಲಸ ಸುಗಮವಾಗುತ್ತೆ ಎಂಬ ಉದ್ದೇಶ ಹೊಂದಿದ್ದರು. ನನ್ನನ್ನು ಹತ್ಯೆ ಮಾಡಲು ನಂದಿ ಕನ್ ಸ್ಟ್ರಕ್ಷನ್ ನ ಮಂಜುನಾಥ, ವಿನಯ್, ರಾಕೇಶ್ ಸಾಯಿ ಗಾರ್ಡನ್ ಬಳಿ ಎಲ್ಲ ತಯಾರಿ ನಡೆಸಿರುವ ಬಗ್ಗೆ ವೀರೇಶ್ ಹಿರೇಮಠ್ ನನಗೆ ತಿಳಿಸಿದ, ತಕ್ಷಣವೇ ಮಂಜುನಾಥ, ವಿನಯ್, ರಾಕೇಶ್ ಸೇರಿ ನನ್ನ ಹತ್ಯೆಗೆ ಒಳಸಂಚು ಮಾಡಿ ತಯಾರಿ ನಡೆಸಿದವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಹೆಚ್. ಎಸ್. ಶಿವಶಂಕರ್ ಒತ್ತಾಯಿಸಿದ್ದಾರೆ.