ದಾವಣಗೆರೆ: ಮಾಜಿ ಸಚಿವ ಹೆಚ್.ವಿಶ್ವನಾಥ್ ಅವರು ಹಿರಿಯರು ಹಾಗೇ ಮಾತನಾಡುತ್ತಾರೆ. ಅವರಿಗೆ ಏನೂ ತಿಳಿದಿತ್ತೋ ನನಗೆ ಗೊತ್ತಿಲ್ಲ ಎಂದು ವಿಶ್ವನಾಥ್ ಅವರ ಭಾರಿ ಮೊತ್ತದ ಹಣದ ಹೇಳಿಕೆಗೆ ಸಂಸದ ಜಿ ಎಂ ಸಿದ್ದೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ ವಿಶ್ವನಾಥ್ ಅವರ ಹೇಳಿಕೆ ಗಮನಿಸಿದ್ದೇನೆ. ಭಾರಿ ಮೊತ್ತ ಅಂದರೆ ಏನರ್ಥ, ನನ್ನ ಬಳಿ ಇದಕ್ಕೆ ಉತ್ತರವಿಲ್ಲ. ಇದರ ಬಗ್ಗೆ ನೋಡಿಕೊಳ್ಳಲು ರಾಜ್ಯದ ಹಿರಿಯ ನಾಯಕರಿದ್ದಾರೆ. ಹೆಚ್ ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವುದು ಸಿಎಂ ಯಡಿಯೂರಪ್ಪನವರಿಗೆ ಬಿಟ್ಟ ವಿಚಾರ.
ಈಗಾಗಲೇ ಹೆಚ್.ವಿಶ್ವನಾಥ್ ಅವರನ್ನು ರಾಜ್ಯದ ನಾಯಕರು ಓಲೈಕೆ ಮಾಡುವ ಕೆಲಸ ಮಾಡುತ್ತಾರೆ ಎಂದರು. ಸಿ ಪಿ ಯೋಗಿಶ್ವರ್ಗೆ ಸಚಿವ ಸ್ಥಾನ ನೀಡುವುದಾಗಿ ಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಯಡಿಯೂರಪ್ಪನವರು ಅವರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಇದಕ್ಕೆ ಹೈಕಮಾಂಡ್ ಕೂಡ ಒಪ್ಪಿಗೆ ನೀಡಿದೆ ಎಂದು ಯೋಗೇಶ್ವರ್ ಹೇಳಿಕೊಂಡಿದ್ದಾರೆ. ಯೋಗೇಶ್ವರ್ ಕೂಡ ಆ ಭಾಗದಲ್ಲಿ ಪ್ರಭಾವಿ ಒಕ್ಕಲಿಗ ನಾಯಕರಾಗಿದ್ದಾರೆ. ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ನೀಡಲು ಶಾಸಕ ರೇಣುಕಾಚಾರ್ಯ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.