ದಾವಣಗೆರೆ: ಕಳೆದ ದಿನ ಗಲಾಟೆಗೆ ಕಾರಣವಾದ ಹರಿಹರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪೂರ್ವ ವಲಯ ಪ್ರಭಾರ ಐಜಿಪಿ ಎಲ್. ಸತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾಲೇಜಿನ ಸಿಬ್ಬಂದಿಯೊಂದಿಗೆ ಮಾಹಿತಿ ಕಲೆ ಹಾಕಿದರು.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಜೆಸಿ ರಸ್ತೆಯಲ್ಲಿರುವ ಕಾಲೇಜಿಗೆ ಭೇಟಿ ನೀಡಿ ಕಳೆದ ಹಿಜಾಬ್ ಹಾಗೂ ಕೇಸರಿ ಶಾಲು ವಿಚಾರವಾಗಿ ಕಲ್ಲು ತೂರಾಟ ಹಾಗೂ ಗಲಭೆಗೆ ಕಾರಣ ಬಗ್ಗೆ ಎಸ್ ಪಿ ಹಾಗೂ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕಳೆದ ದಿನ ಕಾಲೇಜಿನ ಆವರಣದಲ್ಲಿ ಪರಿಸ್ಥಿತಿ ನಿಯಂತ್ರಸಲು ಲಾಠಿ ಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗವನ್ನು ಪೊಲೀಸರು ಮಾಡಿದರು. ಐಜಿಪಿ ಭೇಟಿ ಬೆನ್ನಲ್ಲೇ ಪ್ರತಿಕ್ರಿಯಿಸಿದ ಎಸ್ಪಿ ಸಿಬಿ ರಿಷ್ಯಂತ್ ಅವರು, ನಿನ್ನೆ ನಡೆದ ಗಲಭೆ ಹಿನ್ನೆಲೆ ಒಟ್ಟು 6 ಪ್ರಕರಣ ದಾಖಲು ಮಾಡಲಾಗಿದೆ.
ವಿದ್ಯಾರ್ಥಿಗಳು ಪರಸ್ಪರ ಗಲಾಟೆ ಮಾಡಿದ 1 ಪ್ರಕರಣ ಹಾಗೂ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ 4 ಪ್ರಕರಣ ಕಲ್ಲು ತೂರಾಟದಲ್ಲಿ ಗಾಯಗೊಂಡ ವ್ಯಕ್ತಿಯ 1 ಪ್ರಕರಣ ಒಟ್ಟು 6 ಪ್ರಕರಣಗಳು ದಾಖಲು ಮಾಡಲಾಗಿದೆ. ಗಲಭೆ ಪ್ರಕರಣದಲ್ಲಿ ಅನಗತ್ಯವಾಗಿ ಯಾರನ್ನೂ ಬಂಧಿಸುವುದಿಲ್ಲ. ಗಲಭೆ ಬಗ್ಗೆ ಸಾಕಷ್ಟು ವಿಡಿಯೋಗಳು ಲಭ್ಯವಾಗಿವೆ ಎಂದರು.
ವಿಡಿಯೋ ಆಧರಿಸಿ ಗಲಭೆಯಲ್ಲಿ ಪಾಲ್ಗೊಂಡವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ. ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಬಗ್ಗೆಯೂ ಪ್ರಕರಣ ದಾಖಲಿಸಿದ್ದೇವೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದೇವೆ. ಈ ಕೃತ್ಯ ಪೂರ್ವ ನಿಯೋಜನೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಾಧ್ಯಮಗಳಿಗೆ ಎಸ್ಪಿ ಸಿ. ಬಿ ರಿಷ್ಯಂತ್ ಮಾಹಿತಿ ನೀಡಿದರು.
ಓದಿ: ದಿಂಬಂ ಘಾಟಿಯಲ್ಲಿ ಫೆ.10ರಿಂದ ರಾತ್ರಿ ಸಂಚಾರ ನಿರ್ಬಂಧ : ಪ್ರತಿಭಟನೆಗೆ ಮುಂದಾದ ಜನತೆ