ದಾವಣಗೆರೆ: ಎರಡು ವರ್ಷದ ಅವಧಿಗೆ ಬಿ ಎಸ್ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ಆದ್ರೆ ಮತ್ತೆ ಸಿಎಂ ಬದಲಾವಣೆಗೆ ಗೊಂದಲ ಯಾಕೆ ಬರುತ್ತಿದೆ ಎಂಬುದು ಗೊತ್ತಾಗ್ತಿಲ್ಲ ಅಂತ ಸಂಸದ ಜಿ ಎಂ ಸಿದ್ದೇಶ್ವರ್ ಹೇಳಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು ಸಿಎಂ ಬಿಎಸ್ವೈ ಅವರು ಕೊರೊನಾ ವೇಳೆಯಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಅವರೇ ನಮ್ಮೆಲ್ಲರ ನಾಯಕರು. ಅವರೇ ಎರಡು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯುತ್ತಾರೆ. ಆದ್ರೆ ಯತ್ನಾಳ್, ಯೋಗಿಶ್ವರ್, ಬೆಲ್ಲದ್ ಒಂದು ವರ್ಷದಿಂದಲೇ ಸಿಎಂ ಬದಲಾವಣೆ ವಿಚಾರ ಹೇಳುತ್ತಿದ್ದಾರೆ. ಈ ಮೂವರು ಹೇಳ್ತಾನೇ ಇದ್ದಾರೆ, ಸಿಎಂ ಬದಲಾವಣೆ ಆಗಿದೆಯಾ? ಭಗವಂತ ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದರು.
ಇದನ್ನೂ ಓದಿ: ದೆಹಲಿ ಪ್ರವಾಸಕ್ಕೆ ಸಿಎಂ ಬಿಎಸ್ವೈ 6 ಬ್ಯಾಗ್ ಕೊಂಡೊಯ್ದಿದ್ದಾರೆ: ಹೆಚ್ಡಿಕೆ ಹೊಸ ಬಾಂಬ್
ಬಿಎಸ್ವೈ ರಾಜ್ಯದ ಅಭಿವೃದ್ಧಿ, ಹಣಕಾಸಿನ ವಿಚಾರಕ್ಕೆ ದೆಹಲಿಗೆ ಹೋಗಿದ್ದರು ಎಂದು ಸ್ಪಷ್ಟಪಡಿಸಿದರು. ಮಾಜಿ ಸಿಎಂ ಕುಮಾರಸ್ವಾಮಿ ಹೇಳಿರುವ ಆರು ಬ್ಯಾಗ್ ವಿಚಾರವಾಗಿ ಪ್ರತಿಯಿಸಿದ ಅವರು, ಬಟ್ಟೆ ಬರೆ ತೆಗೆದುಕೊಂಡು ಹೋಗಿದ್ದಾರೆ. ಅದರಲ್ಲಿ ಹಣ ಇದ್ದಿದ್ದರೆ ಸೀಜ್ ಮಾಡಬಹುದಿತ್ತು. ಇವೆಲ್ಲ ಭ್ರಮೆ ಬರುವಂತಹ ಬೋಗಸ್ ಹೇಳಿಕೆ ಎಂದು ಹೇಳಿದರು.