ದಾವಣಗೆರೆ: ಇದೀಗ ಟೊಮೆಟೊ ತರಕಾರಿಗಳಲ್ಲೇ ರಾಜ ಎನ್ನಿಸಿಕೊಳ್ಳುವ ಪರಿಸ್ಥಿತಿ ಇದೆ. ಏಕೆಂದರೆ ಬೆಲೆ ಗಗನಕ್ಕೇರಿದೆ. ಇನ್ನೊಂದೆಡೆ, ರೈತರು ಬೆಳೆ ಬೆಳೆಯುತ್ತಿರುವ ಜಮೀನುಗಳಲ್ಲೇ ಮೊಕ್ಕಾಂ ಹೂಡುವಂತಾಗಿದೆ. ಕಳ್ಳರ ಕಾಟದಿಂದ ಬೇಸತ್ತಿರುವ ಅವರಿಗೆ ಟೊಮೆಟೊ ರಕ್ಷಣೆ ಮಾಡುವುದು ತಲೆನೋವಾಗಿ ಪರಿಣಮಿಸಿದೆ. ದಾವಣಗೆರೆಯ ರೈತರು ಎರಡು ನಾಯಿಗಳೊಂದಿಗೆ ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾರೆ.
ಮಾಯಕೊಂಡ ಹೋಬಳಿಯಲ್ಲಿ ಟೊಮೆಟೊ ಹೆಚ್ಚಾಗಿ ಬೆಳೆಯುತ್ತಾರೆ. ಸುತ್ತಮುತ್ತಲ ಗ್ರಾಮದ ಜಮೀನುಗಳಲ್ಲಿ ಬೆಳೆಯುವ ತರಕಾರಿ ವಿದೇಶಗಳಿಗೂ ರಫ್ತಾಗುತ್ತದೆ. ಈಗಂತೂ ಟೊಮೆಟೊಗೆ ಬೆಲೆ ಕೇಳುವಂತಿಲ್ಲ. ಪ್ರತಿ ಕೆಜಿಗೆ 100ರಿಂದ 150 ರೂಪಾಯಿವರೆಗೆ ಇದೆ. ಬೆಲೆ ಏರಿಕೆಯಾದ್ದರಿಂದ ಜಮೀನುಗಳಲ್ಲಿ ಕಳ್ಳರ ಕಾಟವೂ ಹೆಚ್ಚಾಗಿದೆ. ಹೀಗಾಗಿ ಕೊಡಗನೂರು ಗ್ರಾಮದ ರೈತರು ಶ್ವಾನಗಳೊಂದಿಗೆ ಹಗಲು, ರಾತ್ರಿ ಬೆಳೆ ರಕ್ಷಣೆ ಮಾಡುತ್ತಿದ್ದಾರೆ.
ಕೊಡಗನೂರು ಗ್ರಾಮದ ಶರಣಪ್ಪ ಹಾಗೂ ಶರತ್ ಎಂಬಿಬ್ಬರು ರೈತರು ತಲಾ ಒಂದೊಂದು ಎಕರೆಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಶ್ವಾನ ಹಾಗೂ ಇವರ ಕುಟುಂಬ ಕಾವಲಿದ್ರೂ ಕೂಡ ಐದಾರು ಬಾಕ್ಸ್ ಟೊಮೆಟೊ ಕಳ್ಳತನವಾಗಿದೆಯಂತೆ. ಕೊಡಗನೂರು ಗ್ರಾಮದ ರೈತ ಮಹಿಳೆ ಪ್ರೇಮ ಕೂಡಾ ತಮ್ಮ ಒಂದೆಕರೆ ಜಮೀನಿನಲ್ಲಿ ಟೊಮೆಟೊ ಬೆಳೆದು ಕಾವಲು ಕಾಯುತ್ತಿದ್ದಾರೆ. ಇವರು ಈಗಾಗಲೇ 200 ಬಾಕ್ಸ್ ಟೊಮೆಟೊ ಮಾರುಕಟ್ಟೆ ತಲುಪಿಸಿದ್ದಾರೆ. ಹೊಲವನ್ನು ಇವರ ಪತಿ, ಮಕ್ಕಳು ಒಬ್ಬೊಬ್ಬರು ಒಂದೊಂದು ಪಾಳಿಯಂತೆ ಕಾವಲು ಕಾಯುತ್ತಿದ್ದಾರೆ.
ಬಾಕ್ಸ್ ಟೊಮೆಟೊಗೆ 1,800 ರಿಂದ 2,000 ರೂ.: ''ಒಂದು ಬಾಕ್ಸ್ ಟೊಮೆಟೊಗೆ ಸದ್ಯ 1,800ರಿಂದ 2,000 ರೂಪಾಯಿ ಇದೆ. ಆದರೆ ನಮಗೆ ಬೆಳೆ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಈ ವರ್ಷ ಬೆಳೆ ಚೆನ್ನಾಗಿದ್ದು, ಕಳ್ಳರ ಕಾಟದಿಂದ ತೊಂದರೆಯಾಗಿದೆ. ಒಬ್ಬೊಬ್ಬರಂತೆ ಬೆಳೆ ಕಾಯಬೇಕಾಗಿದೆ. ಕಾವಲು ಕಾಯ್ತಿದ್ರೂ ಹೊಲದ ಕೊನೆಯ ಭಾಗದಲ್ಲಿರುವ ಟೊಮೆಟೊ ಕಳ್ಳತನ ಮಾಡಿದ್ದಾರೆ'' ಎಂದು ರೈತ ಮಹಿಳೆ ಪ್ರೇಮಾ ತಿಳಿಸಿದರು.
ಕೊಡಗನೂರಿನ ಟೊಮೆಟೊಗೆ ಭಾರಿ ಬೇಡಿಕೆ: "ಕೊಡಗನೂರು ಗ್ರಾಮದ ಸುತ್ತಮುತ್ತ ಬೆಳೆಯುವ ಟೊಮೆಟೊಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ವಿವಿಧೆಡೆ ರಫ್ತಾಗುತ್ತದೆ" ಎಂದು ರೈತ ಶರಣಪ್ಪ ಹೇಳಿದರು.
ಇದನ್ನೂ ಓದಿ: ಜಾಗಿಂಗ್ನಲ್ಲಿ ರೈತನ ಮೇವಿನ ಗಾಡಿ ತಳ್ಳಿ ಸಹಾಯ ಮಾಡಿದ ಸಂತೋಷ್ ಲಾಡ್: ಸಾರ್ವಜನಿಕರಿಂದ ಮೆಚ್ಚುಗೆ