ಹರಿಹರ: ನಗರಕ್ಕೆ ಧಿಡೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ವಿವಿಧ ಕಾಮಗಾರಿಗಳನ್ನು ಪ್ರಗತಿ ಪರಿಶೀಲಿಸಿ ಮಂದಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ರು.
ನಗರಸಭೆಗೆ ಭೇಟಿ ನೀಡಿ ಕಡತಗಳನ್ನು ವೀಕ್ಷಿಸಿದ ಜಿಲ್ಲಾಧಿಕಾರಿ ಬಳಿಕ ಎಲ್ಲಾ ಕಾಮಗಾರಿಗಳ ಪ್ರಗತಿ ವರದಿಯ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಆದೇಶ ನೀಡಿದರು.
ಬಳಿಕ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಯೋಗಕ್ಷೇಮ ವಿಚಾರಿಸಿ, ಆಸ್ಪತ್ರೆಯಲ್ಲಿ ವೈದ್ಯರು ನೀಡುತ್ತಿರುವ ಚಿಕಿತ್ಸೆಯ ಗುಣಮಟ್ಟ ಹಾಗೂ ಹೆರಿಗೆಗಳ ಬಗ್ಗೆ ಮಾಹಿತಿ ಪಡೆದರು. ಮಹಾತ್ಮ ಗಾಂಧಿ ಕೊಳಚೆ ಪ್ರದೇಶದಲ್ಲಿರುವ ನಿವಾಸಿಗಳಿಗೆ ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವಂತೆ ತಿಳಿಸಿದ್ರು.
ಅಲ್ಲಿಂದ ಗುತ್ತೂರಿಗೆ ಭೇಟಿ ನೀಡಿ ಹೆಲಿಪ್ಯಾಡ್ನಲ್ಲಿರುವ ಎಂಟು ಎಕರೆ ಜಮೀನಿನಲ್ಲಿ ವಸತಿ ರಹಿತರಿಗೆ ಜಿ+2 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲು ಡಿಪಿಆರ್ ಪೂರ್ಣಗೊಂಡಿದ್ದು, ಶೀಘ್ರದಲ್ಲಿ ವಸತಿಗಳನ್ನು ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದ್ರು.
ಒಳಚರಂಡಿ ಶೇಖರಣಾ ಘಟಕಕ್ಕೆ ಭೇಟಿ ನೀಡಿ ಆಮೆ ವೇಗದಲ್ಲಿ ಸಾಗುತ್ತಿರುವ ಕಾಮಗಾರಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಮನೆಗಳಿಗೆ ಒಳಚರಂಡಿ ಸಂಪರ್ಕ ನೀಡುವಂತೆ ಸೂಚಿಸಿದ್ರು. ಈ ಪ್ರದೇಶದಲ್ಲಿ 17 ಸಾವಿರ ಮನೆಗಳಿದ್ದು, ಇದರಲ್ಲಿ ಇದುವರೆಗೂ ಕೇವಲ 70 ಮನೆಗಳಿಗೆ ಮಾತ್ರ ಒಳಚರಂಡಿ ಸಂಪರ್ಕ ನೀಡಲಾಗಿದೆ. ಉಳಿದ 16,930 ಮನೆಗಳಿಗೆ ಸಂಪರ್ಕ ನೀಡುವುದು ಯಾವಾಗ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪೌರಾಯುಕ್ತೆ ಎಸ್. ಲಕ್ಷ್ಮಿ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ ವಾಗೀಶ್ ಸ್ವಾಮಿ, ನಗರಸಭಾ ಸಿಬ್ಬಂದಿಗಳಾದ ಮಹೇಶ್ ಕೋಡಬಾಳ್, ರವಿಪ್ರಕಾಶ್, ಸಂತೋಷ್, ಸದಸ್ಯರಾದ ಆಟೋ ಹನುಮಂತ, ಜಂಬಣ್ಣ, ಕೆ.ಜಿ ಸಿದ್ದೇಶ್ ಹಾಗೂ ಮತ್ತಿತರಿದ್ದರು.