ದಾವಣಗೆರೆ : ಕೊರೊನಾ ಭೀತಿಯಿಂದ ಶಾಲಾ-ಕಾಲೇಜುಗಳು ಬಂದ್ ಆಗಿ ಪಠ್ಯಗಳು ಪುಸ್ತಕದಲ್ಲೇ ಉಳಿದವು. ಆದರೆ ಬೆಣ್ಣೆ ನಗರಿಯ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳು ಮಾತ್ರ ಲಾಕ್ಡೌನ್ ಸಮಯದಲ್ಲಿ ತಮ್ಮ ತಲೆಗೆ ಹೆಚ್ಚು ಕೆಲಸ ಕೊಟ್ಟು ತಾಂತ್ರಿಕತೆಯ ಲೇಪನ ಮಾಡಿ ನವೀನ ಆವಿಷ್ಕಾರಗಳ ಮೂಲಕ ಗಮನ ಸೆಳೆದಿದ್ದಾರೆ.
60ಕ್ಕೂ ಅಧಿಕ ಪ್ರಾಜೆಕ್ಟ್ :
ಕೊರೊನಾ ವೇಳೆ, ವಿದ್ಯಾರ್ಥಿಗಳು ತಮ್ಮ ಉಪನ್ಯಾಸಕರ ಮಾರ್ಗದರ್ಶನದಲ್ಲಿ ರೈತರಿಗೆ ಸೇರಿದಂತೆ ಜನಸಾಮಾನ್ಯರಿಗೆ ಉಪಯೋಗವಾಗುವ 60 ಕ್ಕೂ ಹೆಚ್ಚು ಪ್ರಾಜೆಕ್ಟ್ಗಳ್ನು ತಯಾರಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಅದರಲ್ಲಿ ಹಲವು ಪ್ರಾಜೆಕ್ಟ್‌ಗಳು ಸಾಮಾಜಿಕ ಪ್ರಸ್ತುತಿಯನ್ನು ಹೊಂದಿರುವುದು ವಿಶೇಷ.
ಉಪಯುಕ್ತವಾದ ಪ್ರಯೋಗಗಳು:
ಮೀನುಗಾರಿಕೆಗೆ ವಿವಿಧ ತಂತ್ರಜ್ಞಾನ ಬಳಸಿ ಆಧುನಿಕತೆ ಟಚ್ ನೀಡಿದ್ದು, ನೀರಿನ ಪಿಎಚ್ ಮಟ್ಟ, ಆಮ್ಲಜನಕ ಹಾಗೂ ತಾಪಮಾನ ಮಾಹಿತಿ ಸಂಗ್ರಹಿಸಿ ಎಚ್ಚರಿಕೆ ನೀಡುವ ಯಂತ್ರ, ಮಿನಿ ರೋಬೋಟ್ ಮಾದರಿ ಯಂತ್ರಗಳು ವಿದ್ಯಾರ್ಥಿಗಳ ಬುದ್ಧಿಮತ್ತೆಯಿಂದ ಸಿದ್ಧವಾಗಿವೆ.
ವಿದ್ಯಾರ್ಥಿಗಳಿಂದ ರೂಪುಗೊಂಡ ಆವಿಷ್ಕಾರಗಳು:
ಅಡಕೆ ಪಟ್ಟಿಗಳನ್ನು ಬಳಸಿ ಆಕರ್ಷಕ ಹ್ಯಾಂಡ್ ಬ್ಯಾಗ್, ಮಣ್ಣಿನಲ್ಲಿ ಕರಗುವ ಅಡಕೆ ಸಿಪ್ಪೆ ಸ್ಯಾನಿಟರಿ ನ್ಯಾಪ್‌ಕಿನ್, ಬಿತ್ತನೆ ಬಳಿಕ ಒಂದೊಂದೇ ಬೀಜಕ್ಕೆ ನೀರಿಡುವ ಯಂತ್ರ, ಆನೆಗಳ ಹಾಗೂ ಇತರೆ ಪ್ರಾಣಿಗಳ ದಾಳಿಯ ಮಾಹಿತಿ ನೀಡುವ ಸೆನ್ಸಾರ್ ಮಾದರಿಯ ತಂತ್ರಜ್ಞಾನ, ಬೀದಿ ದೀಪಗಳನ್ನು ನಿಯಂತ್ರಿಸುವ ಸೆನ್ಸಾರ್ ಸಾಧನ, ಮಕ್ಕಳಿಗೆ ಆನ್ಲೈನ್ ತರಗತಿಯಲ್ಲಿ ಪಾಠ ಅರ್ಥವಾಗಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳುವ ತಂತ್ರಜ್ಞಾನ, ಫಸಲು, ಕಟಾವು, ಬೀಜ ಬಿತ್ತನೆ, ಕಳೆ ತೆಗೆಯುವುದು, ನೀರು ಹಾಯಿಸುವುದು ಎಲ್ಲಾ ಕೆಲಸ ಮಾಡುವ ರೋಬೋ, ಹೀಗೆ ಹತ್ತು ಹಲವು ಯಂತ್ರಗಳು ವಿದ್ಯಾರ್ಥಿಗಳಿಂದ ಆವಿಷ್ಕಾರಗೊಂಡಿವೆ.
ವಿವಿಧ ಸಂಸ್ಥೆಗಳಿಂದ ಸಹಾಯ ಹಸ್ತ:
ಈ ವಿದ್ಯಾರ್ಥಿಗಳು ತಯಾರಿಸಿದ 60 ಅತ್ಯುತ್ತಮ ಪ್ರಾಜೆಕ್ಟ್‌ಗಳನ್ನು ಕಾಲೇಜಿನಲ್ಲಿ ಪ್ರದರ್ಶನಕ್ಕೂ ಕೂಡ ಇಡಲಾಗಿದೆ. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ, ಜಿಎಂಐಟಿ ಕಾಲೇಜಿನಿಂದ ,ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನ್ಯೂಏಜ್ ಇನ್‌ಕ್ಯುಬೇಷನ್ ನೆಟ್‌ವರ್ಕ್ ಈ ಎಲ್ಲಾ ಸಂಸ್ಥೆಗಳಿಂದ ವಿದ್ಯಾರ್ಥಿಗಳಿಗೆ ಒಟ್ಟು 60 ಲಕ್ಷ ರೂಪಾಯಿ ಪ್ರೋತ್ಸಾಹಧನ ದೊರೆತಿದೆಯಂತೆ.
ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಕಡಿಮೆ ವೆಚ್ಚದಲ್ಲಿ, ಪರಿಸರಕ್ಕೆ ಹಾನಿಯಾಗದಂತೆ ಸಜ್ಜುಗೊಳಿಸಬೇಕಾದುದು ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿರುವ ಸವಾಲು. ಈ ಹಿನ್ನೆಲೆ ಪ್ಲಾಸ್ಟಿಕ್ ಪೂರಕ ಹಾಗೂ ಅಡಕೆ ಸಿಪ್ಪೆಯ ನಾರಿನ ಸದ್ಬಳಕೆಯಿಂದ ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಕೆ ಸೇರಿ ಹಲವು ಆವಿಷ್ಕಾರಗಳು ವಿದ್ಯಾರ್ಥಿಗಳ ಪರಿಸರ ಕಾಳಜಿಗೆ ಸಾಕ್ಷಿಯಾಗಿದ್ದವು. ಇವೆಲ್ಲವೂ ಆದಷ್ಟು ಬೇಗನೆ ಪ್ರಸ್ತುತಿಗೆ ಬರಲಿ ಎಂಬುದು ಯೋಜನೆಗಳ ಮಾರ್ಗದರ್ಶಕರ ಆಶಯವಾಗಿದೆ.
ಓದಿ: ಕೇಂದ್ರ ಸಚಿವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ.. ರಾಜ್ಯದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆ..