ದಾವಣಗೆರೆ: ದಾವಣಗೆರೆ ಬೆಣ್ಣೆದೋಸೆಯ ಸಾಂಪ್ರದಾಯಿಕತೆ ಉಳಿಸುವ ದೃಷ್ಟಿಯಿಂದ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ದೋಸೆಗೆ ಬ್ರ್ಯಾಂಡಿಂಗ್ ನೀಡುವ ಉದ್ದೇಶದಿಂದ ಜಿಲ್ಲಾಡಳಿತ ಮೂರು ದಿನಗಳ ದೋಸೋತ್ಸವವನ್ನು ಆಯೋಜಿಸಿದೆ. ದಾವಣಗೆರೆ ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಸಭಾದ 24ನೇ ಅಧಿವೇಶನ ನಡೆಯುತ್ತಿದ್ದು, ಈ ಹಿನ್ನೆಲೆ ಗ್ಲಾಸ್‍ಹೌಸ್ ಮುಂಭಾಗ ಮೂರು ದಿನಗಳ ಕಾಲ ದೋಸೋತ್ಸವಕ್ಕಿಂದು ಚಾಲನೆ ನೀಡಲಾಗಿದೆ.
ಉತ್ಸವದಲ್ಲಿ ನಗರದ 10ಕ್ಕೂ ಹೆಚ್ಚು, ಪ್ರಸಿದ್ಧಿ ಪಡೆದಿರುವ ದೋಸೆ ಹೋಟೆಲ್ಗಳು ಸ್ಟಾಲ್ಗಳನ್ನು ತೆರೆದು ಘಮ ಘಮವಾದ ಹಾಗೂ ರುಚಿ ರುಚಿಯಾದ ಬೆಣ್ಣೆ ದೋಸೆಗಳನ್ನು ಜನರಿಗೆ ಉಣಬಡಿಸುತ್ತಿವೆ. ದಾವಣಗೆರೆ ಜಿಲ್ಲಾಡಳಿತ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನ ನೇತೃತ್ವದಲ್ಲಿ ದೋಸೆ ಹಬ್ಬವನ್ನು ಆಯೋಜಿಸಲಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ಜರಗುವ ಈ ದೋಸೆ ಉತ್ಸವದಲ್ಲಿ ಸಾರ್ವಜನಿಕರು ಭೇಟಿ ನೀಡಿ ತಮಗಿಷ್ಟವಾದ ದೋಸೆ ಸವಿಯಬಹುದಾಗಿದೆ.
![Davanagere Benne Dose Fair](https://etvbharatimages.akamaized.net/etvbharat/prod-images/23-12-2023/20340186_dosemeg.jpg)
ದೋಸೋತ್ಸವದಲ್ಲಿ 5 ಲಕ್ಷ ಜನರು ಭಾಗಿಯಾಗಬೇಕು ಎಂಬ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಈ ಗುರಿಯನ್ನು ತಲುಪಲು ಪ್ರಮುಖವಾದ ಎರಡು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಧಿವೇಶನಕ್ಕೆ ಆಗಮಿಸಿದ ಜನರಲ್ಲಿ ಬಹೇತೇಕರು ಉತ್ತರ ಕರ್ನಾಟಕದ ಮಂದಿ ಗರಿಗರಿಯಾದ ಬೆಣ್ಣೆ ದೋಸೆ ಸವಿದರು.
ರಾಷ್ಟ್ರಮಟ್ಟದಲ್ಲಿ ಬೆಣ್ಣೆದೋಸೆಗೆ ಬ್ರ್ಯಾಂಡ್: ಅಧಿವೇಶನದಲ್ಲಿ ಹಾಕಿರುವ 10ಕ್ಕೂ ಹೆಚ್ಚು ದೋಸೆ ಸ್ಟಾಲ್ಗಳಲ್ಲಿ ಬೆಣ್ಣೆದೋಸೆ, ಬೆಣ್ಣೆ ಮಸಾಲಾ, ಮಸಾಲಾ ದೋಸೆ, ಖಾಲಿ ದೋಸೆ ಹೀಗೆ ನಾನಾ ರೀತಿ ದೋಸೆಗಳನ್ನು ತಯಾರು ಮಾಡಲಾಗುತ್ತಿದೆ. ಎರಡು ಬೆಣ್ಣೆ ದೋಸೆಗೆ 120 ರೂಪಾಯಿ ಬೆಲೆ ನಿಗದಿ ಮಾಡಿದ್ದರಿಂದ ಬೆಣ್ಣೆಯ ಘಮಲಿಗೆ ಮನಸೋತ ಗ್ರಾಹಕರು ಸ್ಟಾಲ್ನತ್ತ ಧಾವಿಸುತ್ತಿದ್ದಾರೆ. ಇನ್ನು ದೋಸೆಯ ಗುಣಮಟ್ಟ ಕಾಪಾಡಿಕೊಂಡು ದಾವಣಗೆರೆ ಬೆಣ್ಣೆದೋಸೆಗೆ ಬ್ರ್ಯಾಂಡಿಂಗ್ ಕಲ್ಪಿಸುವುದು ಈ ಹಬ್ಬದ ಉದ್ದೇಶವಾಗಿದೆ. ಜಿಲ್ಲಾಡಳಿತ ಈ ಉತ್ಸವ ಮುಗಿದ ಬಳಿಕ ಹೋಟೆಲ್‍ಗಳಿಗೆ ಮಾನದಂಡದ ಅನ್ವಯ ಮುಂದಿನ ದಿನಗಳಲ್ಲಿ ಅಧಿಕೃತ ಬ್ರ್ಯಾಂಡಿಂಗ್ ಟ್ಯಾಗ್ ನೀಡಲಿದ್ದಾರೆ. ಇದಲ್ಲದೇ ಆಹಾರ ಸುರಕ್ಷತಾ ಕಾಯಿದೆ ನಿಯಮ ಪಾಲನೆ, ಗುಣಮಟ್ಟ, ಕಲಬೆರಕೆ ರಹಿತ ಆಹಾರದ ಮಾನದಂಡಗಳನ್ನು ಅಳವಡಿಸಿಕೊಳ್ಳುವವರಿಗೆ ಈ ಟ್ಯಾಗ್ ನೀಡಲಾಗುತ್ತದೆ.
![Davanagere Benne Dose Fair](https://etvbharatimages.akamaized.net/etvbharat/prod-images/23-12-2023/20340186_thbennedoseeg.jpg)
ದೋಸೆ ಸವಿದ ಶೃತಿ ರಾಜ್ ಪ್ರತಿಕ್ರಿಯಿಸಿ, "ದೋಸೋತ್ಸವ ಹಮ್ಮಿಕೊಂಡಿರುವುದಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದಗಳು. ಈ ಉತ್ಸವಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಅಧಿವೇಶನಕ್ಕೆ ಭೇಟಿ ನೀಡುತ್ತಿರುವ ಬೇರೆ ಊರಿನವರು ದೋಸೆ ಸವಿಯುತ್ತಿದ್ದಾರೆ. ರಜಾ ದಿನದಲ್ಲೇ ಉತ್ಸವ ಆಯೋಜಿಸಿರುವುದರಿಂದ ಜನರಿಗೆ ಒಳ್ಳೆಯ ಸಮಯ ಸಿಕ್ಕಂತಾಗಿದೆ. ಬೆಣ್ಣೆದೋಸೆ ದಾವಣಗೆರೆಯ ಐಡೆಂಟಿಟಿ ಆಗಿರುವುದರಿಂದ ರಾಷ್ಟ್ರಮಟ್ಟದಲ್ಲಿ ಇದರ ಖ್ಯಾತಿ ಹಬ್ಬುವಂತೆ ಮಾಡಬೇಕು. ನಾನೂ ದೋಸೆ ಸವಿದಿದ್ದು, ತುಂಬಾ ಚೆನ್ನಾಗಿದೆ. ಈ ರೀತಿಯ ದೋಸೆ ಉತ್ಸವ ಪ್ರತೀ ವರ್ಷ ನಡೆಯಲಿ. ದಾವಣಗೆರೆಯ ನರ್ಗಿಸ್ ಮಂಡಕ್ಕಿ ಕೂಡ ಫೇಮಸ್ ಆಗಿದ್ದು, ಇದೇ ರೀತಿಯಲ್ಲಿ ಅದರ ಉತ್ಸವ ಕೂಡ ಮಾಡಿ ಬ್ರ್ಯಾಂಡ್ ಮಾಡಬೇಕಾಗಿದೆ" ಎಂದರು.
ಬೆಣ್ಣೆ ದೋಸೆ ಇತಿಹಾಸ: ದಾವಣಗೆರೆ ಬೆಣ್ಣೆ ದೋಸೆ ತನ್ನದೇ ಆದ ಇತಿಹಾಸ ಹೊಂದಿದೆ. ಸ್ವಾತಂತ್ರ್ಯ ಪೂರ್ವ 1928 ರಿಂದಲೇ ಸ್ವಾರಸ್ಯಕರ ಇತಿಹಾಸ ಈ ಬೆಣ್ಣೆ ದೋಸೆಗಿದೆ. ಚೆನ್ನಮ್ಮ ಎಂಬ ಮಹಿಳೆ ದಾವಣಗೆರೆಗೆ ತಮ್ಮ ಮಕ್ಕಳೊಂದಿಗೆ ವಲಸೆ ಬಂದು ಈ ನೂತನ ದೋಸೆ ಪಾಕವನ್ನು ಆರಂಭಿಸಿದ್ದರು. ದಾವಣಗೆರೆ ನಗರದ ಸವಲಗಿ ನಾಟಕ ಥಿಯೇಟರ್ ಎದುರಿಗೆ ಈ ಮಹಿಳೆ ಪುಟ್ಟ ದೋಸೆ ಹೋಟೆಲ್ ಆರಂಭಿಸಿದ್ದರು. ಚೆನ್ನಮ್ಮ ತೆರೆದ ಹೋಟೆಲ್ ಇಡೀ ದಾವಣಗೆರೆಯಲ್ಲೇ ರುಚಿಗೆ ಖ್ಯಾತಿ ಗಳಿಸಿತ್ತು. ಚೆನ್ನಮ್ಮ ಮೊದಲು ರಾಗಿ ಹಿಟ್ಟಿನಿಂದ ದೋಸೆ ಆರಂಭಿಸಿದ್ದರು. 1938ರ ನಂತರ ಅವರ ಮಕ್ಕಳ ಜೊತೆ ಸೇರಿ ಉದ್ದಿನ ಬೇಳೆ, ಮಂಡಕ್ಕಿ, ಅಕ್ಕಿಹಿಟ್ಟು, ಅಲ್ಲದೇ ಬೆಣ್ಣೆಯೊಂದಿಗೆ ದೋಸೆ ಮಾಡಲು ಆರಂಭಿಸಿದ್ದರು. ಇದು ಸ್ಥಳೀಯವಾಗಿ ಹೆಚ್ಚು ಜನಪ್ರಿಯವಾಯಿತು. ಹಂತ ಹಂತವಾಗಿ ಚೆನ್ನಮ್ಮ ತೆರೆದಿದ್ದ ಈ ಹೋಟೆಲ್ ಅನ್ನು ಅವರ ಪುತ್ರರಾದ ಮಹದೇವಪ್ಪ ಹಾಗೂ ಶಾಂತಪ್ಪ ಇಬ್ಬರು ಮುಂದುವರೆಸಿದರು.
![Davanagere Benne Dose Fair](https://etvbharatimages.akamaized.net/etvbharat/prod-images/23-12-2023/20340186_thbennemeg.jpg)
ಬಳಿಕ ಶಾಂತಪ್ಪ ಅವರು 1994ರಲ್ಲಿ ನಗರದ ಗಡಿಯಾರ ಗೋಪುರದ ಹತ್ತಿರ 'ಶಾಂತಪ್ಪ ಬೆಣ್ಣೆ ದೋಸೆ ಹೋಟೆಲ್' ತೆರೆದರು. ಇದು ದಾವಣಗೆರೆಯ ಅತ್ಯಂತ ಹಳೆಯ ಬೆಣ್ಣೆ ದೋಸೆ ಹೋಟೆಲ್ ಆಗಿ ಪರಿವರ್ತನೆಯಾಯಿತು. ಅಂದು ಶಾಂತಪ್ಪ ಆರಂಭಿಸಿದ ಹೋಟೆಲ್ ಅನ್ನು ಪ್ರಸ್ತುತ ದಿನಗಳಲ್ಲಿ ಅವರ ಪುತ್ರ ಗಣೇಶ್ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಚೆನ್ನಮ್ಮ ಅವರ ಮತ್ತೋರ್ವ ಪುತ್ರ ಮಹದೇವಪ್ಪ ನಗರದ ವಸಂತ ಚಿತ್ರಮಂದಿರದ ಬಳಿ ಹೋಟೆಲ್ ತೆರೆದರು. ಆದರೆ, ಈಗ ಆ ಹೋಟೆಲ್ ಇಲ್ಲ. ಅಂದಿನಿಂದ ಇಲ್ಲಿ ತನಕ ಬೆಣ್ಣೆ ದೋಸೆ ಹಂತಹಂತವಾಗಿ ಜನಪ್ರಿಯತೆ ಪಡೆಯಿತು. ಪ್ರಸ್ತುತ ದಾವಣಗೆರೆ ನಗರದಲ್ಲಿ ನೂರಾರು ಬೆಣ್ಣೆ ದೋಸೆ ಹೋಟೆಲ್ ಆರಂಭವಾಗಿದ್ದು, ಈ ಎಲ್ಲ ಹೋಟೆಲ್‍ಗಳಿಗೆ ದಾವಣಗೆರೆಯ ಸುತ್ತಮುತ್ತಲಿನ ಗ್ರಾಮಗಳಿಂದ ಬೆಣ್ಣೆ ರಫ್ತಾಗುತ್ತಿದೆ.
ಬೆಣ್ಣೆ ದೋಸೆ ಹೋಟೆಲ್ ಮಾಲೀಕರು ಹೇಳಿದಿಷ್ಟು: ಹೋಟೆಲ್ ಮಾಲೀಕ ಬಿ.ಎಂ.ವಿಜಯ್ ಕುಮಾರ್ ಪ್ರತಿಕ್ರಿಯಿಸಿ, "ದಾವಣಗೆರೆ ಬೆಣ್ಣೆದೋಸೆ ಖ್ಯಾತಿ ಗಳಿಸಿದ್ದು, ರಾಷ್ಟ್ರಮಟ್ಟದಲ್ಲಿ ಬ್ರ್ಯಾಂಡ್ ಮಾಡುವ ಉದ್ದೇಶದಿಂದ ಅಧಿವೇಶನದಲ್ಲಿ ದೋಸೋತ್ಸವ ಹಮ್ಮಿಕೊಳ್ಳಲಾಗಿದೆ. ಉತ್ಸವದಲ್ಲಿ ಭಾಗಿಯಾದ ದೋಸೆ ಹೋಟೆಲ್ ಮಾಲೀಕರಿಗೆ ಉತ್ತಮ ಗುಣಮಟ್ಟದ ಟ್ಯಾಗ್ ಕೂಡ ಸಿಗಲಿದ್ದು, ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಸಾಕಷ್ಟು ಜನ ದೋಸೆ ಸವಿಯುತ್ತಿದ್ದಾರೆ. ದಾವಣಗೆರೆ ನಗರದಲ್ಲಿ ಖ್ಯಾತಿ ಗಳಿಸಿರುವ ದೋಸೆ ಹೋಟೆಲ್ಗಳನ್ನು ಆಯ್ಕೆ ಮಾಡಿ ಇಲ್ಲಿ ಸ್ಟಾಲ್ ಹಾಕಲು ಅನುಮತಿ ಕೊಟ್ಟಿದ್ದಾರೆ.
ಇದನ್ನೂ ಓದಿ: ದಾವಣಗೆರೆ: ನಾಳೆಯಿಂದ 2 ದಿನ ವೀರಶೈವ ಲಿಂಗಾಯತ ಮಹಾ ಅಧಿವೇಶನ, ಬೃಹತ್ ವೇದಿಕೆ ಸಿದ್ಧ