ದಾವಣಗೆರೆ: ಮಹಾನಗರ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಸಂಸದ ಸಿದ್ದೇಶ್ವರ್ ಅವರು ತಮ್ಮ ಪತ್ನಿ ಗಾಯತ್ರಿ ಜೊತೆ ಮಾಗನೂರು ಬಸಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ಮತ ಹಾಕಲು ಆಗಮಿಸಿದ್ದರು.
ಸಿದ್ದೇಶ್ವರ್ ಅವರು 328 ಹಾಗೂ 329ನೇ ಮತಗಟ್ಟೆಗೆ ಬಳಿ ಬರುತ್ತಿದ್ದಂತೆಯೇ ಬೈಕ್ನಲ್ಲಿ ಬಂದ ಏಳೆಂಟು ಕಾಂಗ್ರೆಸ್ ಕಾರ್ಯಕರ್ತರು ಹಸ್ತದ ಗುರುತು ತೋರಿಸಿದರು. ಇದಕ್ಕೆ ಪ್ರತಿಯಾಗಿ ಸಿದ್ದೇಶ್ವರ್ ಅವರು ಕಮಲದ ಗುರುತು ತೋರಿಸಿದರು. ಇದಕ್ಕೆ ಪ್ರತಿಯಾಗಿ ಮತ್ತೆ ಮತ್ತೆ ಕಾಂಗ್ರೆಸಿಗರು ಹಸ್ತ ತೋರಿಸಿ ಕಿಚಾಯಿಸಿದರು. ಆದರೂ ಸಂಸದರು ನಗುತ್ತಲೇ ಮತಗಟ್ಟೆ ಒಳಗಡೆ ಹೋದರು.
ಮತ ಹಾಕಿದ ಬಳಿಕ ತಮ್ಮ ಬೆರಳು ತೋರಿಸಿ ಇಂಕು ಸರಿಯಾಗಿ ಹತ್ತುತ್ತಿಲ್ಲ. ಕೂಡಲೇ ಬೇರೆ ಇಂಕ್ ಅನ್ನು ಬೇಗ ತರಿಸಿ. ಜನರಿಗೆ ಯಾವುದೇ ತೊಂದರೆಯಾಗದಂತೆ ಚುನಾವಣೆ ನಡೆಯಬೇಕು. ಯಾವುದೇ ಸಮಸ್ಯೆಯಾಗದಂತೆ, ಪಾರದರ್ಶಕ ಚುನಾವಣೆ ನಡೆಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಮಾತನಾಡಿದ ಸಿದ್ದೇಶ್ವರ್, ಕಾಂಗ್ರೆಸ್ನವರು ಹಸ್ತ ತೋರಿಸಿದ್ರು, ನಾನು ಕಮಲದ ಚಿಹ್ನೆ ತೋರಿಸಿದೆ. ನಮ್ಮದೇ ವಿಕ್ಟರಿ ಎಂಬುದನ್ನು ಹೇಳಿದೆ. ಕಮಲ ಅರಳುವುದು ಖಚಿತ ಎಂಬ ಸಂಕೇತ ತೋರಿಸಿದೆ. ಅವ್ರು ನನ್ನ ಸ್ನೇಹಿತರು, ಬೈಕ್ನಲ್ಲಿ ಬಂದು ಸೋಲಿನ ಹತಾಶೆಯಿಂದ ಹೀಗೆ ಮಾಡಿದರು ಅಂತಾ ವಿಶ್ಲೇಷಿಸಿದರು.