ದಾವಣಗೆರೆ : ಹೊಸ ವರ್ಷದ ಆಚರಣೆ ವೇಳೆ ಯುವತಿಯರ ಫೋಟೋ ತೆಗೆದದ್ದನ್ನು ಪ್ರಶ್ನಿಸಿದ್ದಕ್ಕೆ ಪುಂಡರು ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ನಿಟ್ಟುವಳ್ಳಿ ನಿವಾಸಿ ಹನಮಂತಪ್ಪ ಎಂಬುವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಲಾಗಿದ್ದು, ಓರ್ವ ಬಾಲಕಿಯ ಕಣ್ಣಿಗೆ ಗಾಯವಾಗಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ರಾತ್ರಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಡಿಸ್ಟ್ರಿಕ್ಟ್ -17 ಹೊಟೇಲ್ ನಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷದ ಹಿನ್ನೆಲೆ ಯುವತಿಯರು, ಮಹಿಳೆಯರು ಪಾರ್ಟಿಗಾಗಿ ಹೋಟೆಲ್ ಗೆ ಆಗಮಿಸಿದ್ದರು. ಈ ವೇಳೆ ಕೆಲ ಪುಂಡರು ಯುವತಿಯರ ಫೋಟೋ ತೆಗೆಯುತ್ತಿದ್ದರಂತೆ. ಇದನ್ನು ಯುವತಿಯರು ಪ್ರಶ್ನಿಸಿದ್ದು, ಈ ವೇಳೆ ಪುಂಡರು ಕೆಲ ಯುವತಿಯರು ಹಾಗು ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಓರ್ವ ವ್ಯಕ್ತಿ ಬಾಟಲ್ ನಿಂದ ಕಾರಿನ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಬಾಲಕಿಗೆ ಕಣ್ಣಿಗೆ ಗಾಯವಾಗಿದೆ. ಈ ದೃಶ್ಯಗಳು ಹೊಟೇಲ್ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಇನ್ನು, ಸಿಸಿಟಿವಿ ದೃಶ್ಯಾವಳಿಯಲ್ಲಿ ಪೊಲೀಸ್ ಜೀಪ್ ಕೂಡ ಸೆರೆಯಾಗಿದೆ. ಸದ್ಯ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಹೊಸ ವರ್ಷಾಚರಣೆಯಲ್ಲಿ ಸ್ನೇಹಿತರ ನಡುವೆ ಗಲಾಟೆ: ಯುವಕನಿಗೆ ಚಾಕು ಇರಿತ