ದಾವಣಗೆರೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಇಎನ್ ಠಾಣೆಯ ಪೊಲೀಸರು ಲಭಿಸಿತ್ತು. ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು, ಮಾದಕ ವಸ್ತು ಹಾಗೂ ಹುಲಿ ಉಗುರುಗಳನ್ನು ವಶಕ್ಕೆ ಪಡೆದುಕೊಂಡು ಏಳು ಆರೋಪಿಗಳನ್ನು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಮೂಲದ ದಾವಣಗೆರೆಯ ಬಾಲಾಜಿ ನಗರದಲ್ಲಿ ನೆಲೆಸಿರುವ ಅಶೋಕ್ ಕುಮಾರ್ ಎಸ್, ರಾಜಸ್ಥಾನ ಮೂಲದ ದಾವಣಗೆರೆ ಆರ್ಎಂಸಿ ಲಿಂಕ್ ರಸ್ತೆಯ ನಿವಾಸಿ ರಮೇಶ್ ಕುಮಾರ್ ಗಾಂಸಿ, ವಿನೋಬ್ ನಗರದ ನಿವಾಸಿ ಕಾರ್ತಿಕ್, ನಿಜಲಿಂಗಪ್ಪ ಬಡಾವಣೆಯ ರಾಮ್ ರತನ್ ಹಾಗೂ ರಾಜಸ್ಥಾನ ರಾಜ್ಯ ಮೂಲದ ಬೆಂಗಳೂರಿನ ಬಸವೇಶ್ವರ ಬಡಾವಣೆಯಲ್ಲಿ ವಾಸಿಸುವ ಸುನೀಲ್‌ಕುಮಾರ್ ಹಾಗೂ ಕೊಡಿಗೆಹಳ್ಳಿಯ ಅಶೋಕ್‌ಕುಮಾರ್ ಬಂಧಿತ ಆರೋಪಿಗಳು.
ಬಂಧಿತರಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಮತ್ತೋರ್ವ ವ್ಯಕ್ತಿಯನ್ನು ಇದೇ ಪ್ರಕರಣದಲ್ಲಿ ಪೊಲೀಸರ ವಶಕ್ಕೆ ಪಡೆದು ಆತನ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ, ಮಾದಕವಸ್ತುಗಳ ದೊಡ್ಡ ಜಾಲ ಇರುವುದು ಪತ್ತೆಯಾಗಿತ್ತು. ಈ ಮಾಹಿತಿ ಆಧರಿಸಿ ಮತ್ತೆ ದಾಳಿ ಮುಂದುವರಿಸಿದ್ದಾರೆ.
ಬೆಂಗಳೂರಿನ ಬಸವೇಶ್ವರ ಬಡಾವಣೆಯಲ್ಲಿರುವ ನಿವಾಸ ಮೇಲೆ ದಾಳಿ ನಡೆಸಿ, ಬಂಧಿತರಿಂದ 49 ಗ್ರಾಂ ಮಾದಕ ವಸ್ತು, 6 ಹುಲಿ ಉಗುರು ಸೇರಿದಂತೆ 4 ಮೊಬೈಲ್ ಪೋನ್ಗಳು, 1 ಕಾರು ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದಿರುವುದು ಅಸಲಿ ಹುಲಿ ಉಗುರು ಎಂಬುದನ್ನು ಬಂಧಿತ ಆರೋಪಿಗಳು ಪೊಲೀಸರ ಎದರು ಒಪ್ಪಿಕೊಂಡಿದ್ದಾರೆ. ತಲೆಮರೆಸಿಕೊಂಡ ಒಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ವಶಕ್ಕೆ ಪಡೆದಿರುವ ಹುಲಿ ಉಗುರುಗಳನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗುವುದು ಎಂದು ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನಲ್ಲಿ ₹18 ಕೋಟಿ ಮೌಲ್ಯದ ಕೆಜಿ ಡ್ರಗ್ಸ್ ಜಪ್ತಿ: ಮಾದಕ ವಸ್ತು ಸೇವನೆ ಹಾಗೂ ಮಾರಾಟದ ವಿರುದ್ಧ ಸಮರ ಸಾರಿರುವ ಬೆಂಗಳೂರು ನಗರ ಪೊಲೀಸರು ಜುಲೈನಲ್ಲಿ ₹18 ಕೋಟಿ ಮೌಲ್ಯದ 1,785 ಕೆಜಿ ತೂಕದ ಹಲವು ಮಾದರಿಯ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಮಾದಕ ವಸ್ತು ಸೇವನೆ, ಮಾರಾಟ ಮಾಡುವವರ ವಿರುದ್ಧ ಕಳೆದೊಂದು ತಿಂಗಳಲ್ಲಿ 378 ಪ್ರಕರಣಗಳು ದಾಖಲಿಸಲಾಗಿದೆ. 474 ಭಾರತೀಯರನ್ನು ಮತ್ತು 13 ವಿದೇಶಿ ಪ್ರಜೆಗಳನ್ನು ಅರೆಸ್ಟ್ ಮಾಡಲಾಗಿದೆ. 72 ಪ್ರಕರಣಗಳಲ್ಲಿ ಡ್ರಗ್ ಪೆಡ್ಲರ್ಗಳ ವಿರುದ್ಧ ಹಾಗೂ 306 ಪ್ರಕರಣಗಳಲ್ಲಿ ಡ್ರಗ್ಸ್ ಸೇವನೆ ಮಾಡುತ್ತಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಇತ್ತೀಚೆಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸ್ಆ್ಯಪ್ ಖಾತೆ ಸೃಷ್ಟಿ: ಪ್ರಕರಣ ದಾಖಲು