ದಾವಣಗೆರೆ : ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ತಯಾರಿ ಆರಂಭಿಸಿದೆ. 45 ವಾರ್ಡ್ಗಳಿಗೆ ಈಗಾಗಲೇ ನಾಲ್ಕು ನೂರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ನಗರದ ಶಾಮನೂರು ಶಿವಶಂಕರಪ್ಪ ಸಭಾ ಭವನದಲ್ಲಿ ಮಧ್ಯಾಹ್ನ 3 ಗಂಟೆಗೆ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ನಡೆಯಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ನಾಳೆ ಸಂಜೆ 5 ಗಂಟೆಗೆ ಆಗಮಿಸಲಿದ್ದು, ಟಿಕೆಟ್ ಆಕಾಂಕ್ಷಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈಗಾಗಲೇ ಚುನಾವಣೆಗೆ ಸಜ್ಜಾಗುತ್ತಿದ್ದೇವೆ. ವಾರ್ಡ್ಗಳ ಭೇಟಿ ಕಾರ್ಯಕ್ರಮ ನಡೆಯುತ್ತಿದೆ. 30 ಸ್ಥಾನ ಗೆಲ್ಲುವುದಾಗಿ ಶಾಮನೂರು ಶಿವಶಂಕರಪ್ಪನವರು ಹೇಳಿದ್ದಾರೆ. ಮಾಜಿ ಸಚಿವ ಪಿ ಟಿ ಪರಮೇಶ್ವರ್ ನಾಯ್ಕ್ ಕೂಡಾ ಕಾಂಗ್ರೆಸ್ 40ಸ್ಥಾನ ಗೆಲ್ಲಲಿದೆ ಎಂದು ಮಾತನಾಡಿದ್ದಾರೆ. ಆದರೆ, ನಾವು ಮಾತನಾಡುವುದಿಲ್ಲ, ಈ ಬಗ್ಗೆ ಮತದಾರರೆ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನ ದುರಾಡಳಿತ, ಆಡಳಿತ ವಿರೋಧಿ ಅಲೆ ಇದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ಹಣ ಬಿಡುಗಡೆಯಾಗಿದ್ದರೂ ಪಾರದರ್ಶಕ ಕೆಲಸ ಆಗಿಲ್ಲ. ಹಾಗಾಗಿ ಜನರು ಈ ಬಾರಿ ಕಾಂಗ್ರೆಸ್ ತಿರಸ್ಕರಿಸಿ ಬಿಜೆಪಿ ಬೆಂಬಲಿಸಲಿದ್ದಾರೆ ಎಂಬ ವಿಶ್ವಾಸ ಇದೆ. ಕೆಲವೆಡೆ ಚೆನ್ನಾಗಿದ್ದ ರಸ್ತೆ, ಚರಂಡಿಗಳನ್ನು ಅಗೆದು ಮತ್ತೆ ಕಾಮಗಾರಿ ಮಾಡಲಾಗುತ್ತಿದೆ. ಈ ಬಗ್ಗೆ ನಮ್ಮಲ್ಲಿ ದಾಖಲಾತಿಗಳಿವೆ ಎಂದರು.