ದಾವಣಗೆರೆ :ಶೈಕ್ಷಣಿಕವಾಗಿ ದೇಶ ವಿದೇಶಗಳಲ್ಲಿ ಗಮನಸೆಳೆದಿರುವ ಬೆಣ್ಣೆ ನಗರಿ ದಾವಣಗೆರೆ ನಗರಕ್ಕೆ ಮತ್ತೊಂದು ಗರಿ ಸೇರ್ಪಡೆಯಾಗಿದೆ. ದೂರದ ಬೆಂಗಳೂರು, ಧಾರವಾಡ, ಮಂಗಳೂರಿನಲ್ಲಿ ಇದ್ದಾ ಪ್ರಾದೇಶಿಕ ವಿಜ್ಞಾನ ಕೇಂದ್ರ ಇದೀಗ ದಾವಣಗೆರೆ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳಿಗಾಗಿಯೇ ಸನ್ನಧವಾಗಿದೆ. ಈ ವಿಜ್ಞಾನ ಕೇಂದ್ರವನ್ನು ವಿದ್ಯಾರ್ಥಿಗಳಿಗೆ ನಿರ್ಮಾಣ ಮಾಡಲಾಗಿದ್ದು, ಪ್ರಕೃತಿಯಲ್ಲಿ ನಡೆಯುವ ವಿಜ್ಞಾನದ ವಿಸ್ಮಯಗಳನ್ನು ಇಲ್ಲಿ ಸವಿಯಬಹುದಾಗಿದೆ.
ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಅನುಕೂಲ.. ದಾವಣಗೆರೆ ಜಿಲ್ಲೆಯ ಮಕ್ಕಳು ವಿಜ್ಞಾನದ ವಿಸ್ಮಯಗಳನ್ನು ಸವಿಯಲು ದಾವಣಗೆರೆ ತಾಲೂಕಿನ ಹುಡುಪಿನಕಟ್ಟೆ ಗ್ರಾಮದಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರ ಸಿದ್ಧವಾಗಿದೆ. ಇದರ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ವಿದ್ಯಾರ್ಥಿಗಳಿಗಾಗಿಯೇ ಉದ್ಘಾಟನೆಗೊಂಡಿದೆ. ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕಲಿಯಲು ಈ ವಿಜ್ಞಾನ ಕೇಂದ್ರ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ.
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ವೈಜ್ಞಾನಿಕ ಪ್ರೋತ್ಸಾಹ ಸೊಸೈಟಿ ವತಿಯಿಂದ ಈಗಾಗಲೇ ಲೋಕಾರ್ಪಣೆಗೊಂಡ ಈ ಕೇಂದ್ರವನ್ನು ಸಂಸದ ಜಿಎಂ ಸಿದ್ದೇಶ್ವರ್ ಅವರು ಉದ್ಘಾಟಿಸಿದರು. ಈ ಕೇಂದ್ರ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಚಟುವಟಿಕೆ ಹಾಗೂ ಸಂಶೋಧನೆಗೆ ಸಹಕಾರಿಯಾಗಲಿದೆ. ಅಲ್ಲದೆ, ವಿದ್ಯಾರ್ಥಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಈ ವಿಜ್ಞಾನ ಕೇಂದ್ರವನ್ನು ನಿರ್ಮಿಸಲಾಗಿದೆ. ಈಗಾಗಲೇ ಶಾಲೆಯ ಮಕ್ಕಳು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನದ ವಿಸ್ಮಯಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇನ್ನು, ಇದೇ ವೇಳೆ ಪ್ರತಿಕ್ರಿಯಿಸಿದ ಸಂಸದ ಜಿ ಎಂ ಸಿದ್ದೇಶ್ವರ್ ಅವರು ಪ್ರಾದೇಶಿಕ ವಿಜ್ಞಾನ ಕೇಂದ್ರ ಮಕ್ಕಳಿಗೆ ಸಹಕಾರಿಯಾಗಲಿದ್ದು, ಇದರ ವಿಸ್ಮಯಗಳನ್ನು ಅರಿಯಲು ದೂರದ ಧಾರವಾಡ ಇಲ್ಲ ಬೆಂಗಳೂರಿಗೆ ಮಕ್ಕಳು ತೆರಳುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಇದೀಗ ನಮ್ಮ ಜಿಲ್ಲೆಯಲ್ಲೇ ಕೇಂದ್ರ ಆರಂಭವಾಗಿದ್ದು, ಮೂರು ತಿಂಗಳಲ್ಲಿ ಜಿಲ್ಲೆಯ ಪ್ರತಿಯೊಂದು ಶಾಲೆಯ ಮಕ್ಕಳು ಇಲ್ಲಿಗೆ ಭೇಟಿ ನೀಡುವಂತಾಗಬೇಕಿದೆ ಎಂದು ಹೇಳಿದರು.
ಈ ವಿಜ್ಞಾನ ಕೇಂದ್ರದ ನಿರ್ಮಾಣಕ್ಕೆ 03.86 ಕೋಟಿ ಮಂಜೂರಾಗಿದ್ದು, ಈ ಪೈಕಿ 03.10 ಕೋಟಿ ನಿರ್ಮಾಣಕ್ಕೆ ಖರ್ಚಾಗಿದೆ. ಉಳಿದ ಹಣದಲ್ಲಿ ಇತರೆ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಡಿ.ಡಿ.ಪಿ.ಐ ಮತ್ತು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ಸಂಸದರು ಆದೇಶಿಸಿದರು.
ಈ ವಿಜ್ಞಾನ ಕೇಂದ್ರದಲ್ಲಿ ಏನೇನಿದೆ.. ಈ ವಿಜ್ಞಾನ ಕೇಂದ್ರ ಹಳ್ಳಿ ಮಕ್ಕಳಿಗೆ ಅನುಕೂಲ ಆಗಲಿದ್ದು, ಬಡ ಮಕ್ಕಳಿಗೂ ಉಪಯೋಗ ಆಗಲಿದೆ. ಇನ್ನು, ಈ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಸೋಲಾರ್ ಸಿಸ್ಟಮ್, ಭೂಮಿ ತಿರುಗುವುದು, ವಿದ್ಯುತ್ ಪೂರೈಕೆ ಆಗುವುದು ಹೇಗೆ, ಅಳವಾದ ಬಾವಿ ರೀತಿ ಕಾಣುವ ವಿಜ್ಞಾನದ ಸಾಧನ, ನ್ಯೂಟನ್ ನಿಯಮ, ಅಸ್ಟೋಡಾನ್ಸ್, ಸಹಾಯವಿಲ್ಲದೆ ಹಾರುವ ಚೆಂಡು, ತೂಗುವ ಸೇತುವೆ ಹೀಗೆ ಮನೋರಂಜನಾ ವಿಜ್ಞಾನ ಹಾಗೂ ವಿಷಯಾಧಾರಿತ ವಿಜ್ಞಾನಕ್ಕೆ ಸಂಬಂಧಿಸಿದ ಗ್ಯಾಲರಿಗಳಿವೆ.
ವಿಷಯಾಧಾರಿತ ವಿಜ್ಞಾನ ಗ್ಯಾಲರಿಯಲ್ಲಿ ಜೀವವೈವಿಧ್ಯ ಹಾಗೂ ಮುಂಚೂಣಿಯ ತಂತ್ರಜ್ಞಾನ ವಿಭಾಗಗಳಿವೆ. ಈ ಗ್ಯಾಲರಿಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಬಳಸಬಹುದಾದ ವಿಜ್ಞಾನದ ಮಾದರಿಗಳಿರುತ್ತವೆ. ಇನ್ನು ನ್ಯಾನೋ ತಂತ್ರಜ್ಞಾನ, ರಾಕೆಟ್ ತಂತ್ರಜ್ಞಾನ, ಸಂವಹನ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನಗಳ ಕುರಿತ ಮಾದರಿಗಳು, ಪ್ರಾತ್ಯಕ್ಷಿಕೆಗಳು ಇವೆ.
ಇದಲ್ಲದೆ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿದ ವಿಜ್ಞಾನಿಗಳ ಫೋಟೋಗಳು ಮಕ್ಕಳನ್ನು ಆಕರ್ಷಿಸಲಿವೆ. ಇನ್ನು, ವಿದ್ಯಾರ್ಥಿಗಳಾದ ಶ್ರೇಯ ಹಾಗು ಶ್ರವಣ್ ಅವರು ಈ ಕುರಿತು ಮಾತನಾಡಿ, ಈ ವಿಜ್ಞಾನ ಕೇಂದ್ರ ಬಡಮಕ್ಕಳ ಕಲಿಕೆಗೆ ಸಹಕಾರಿಯಾಗಲಿದೆ, ಕೇಂದ್ರ ನಿರ್ಮಾಣ ಆಗಿರುವುದು ಸಂತಸದ ವಿಚಾರ, ಇಲ್ಲಿರುವ ಸಾಧನಗಳಿಂದ ಹೆಚ್ಚಿನ ವಿಷಯ ಮತ್ತು ಮಾಹಿತಿಯನ್ನು ತಿಳಿಯಬಹುದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ :ಸಿದ್ದರಾಮಯ್ಯ ಕ್ಷೇತ್ರ ಹುಡುಕಾಡುತ್ತಿದ್ದಾರೆ, ಕಾಂಗ್ರೆಸ್ನವರು ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳಬೇಕು: ಸಚಿವ ಬಿಸಿ ಪಾಟೀಲ್