ದಾವಣಗೆರೆ: ಜನಿಸಿದ ಎರಡೇ ಗಂಟೆಯಲ್ಲಿ ನವಜಾತ ಶಿಶುವೊಂದು ತಾಯಿ ಮಡಿಲು ಸೇರುವ ಬದಲು ಚಾಲಾಕಿ ಮಹಿಳೆಯ ಪಾಲಾಗಿತ್ತು. ಸರ್ಕಾರಿ ಆಸ್ಪತ್ರೆಯಿಂದ ನಾಪತ್ತೆಯಾಗಿ ಬರೋಬ್ಬರಿ 22 ದಿನಗಳಾದ್ರು ಕೂಡ ಮಗು ಪತ್ತೆಯಾಗಿರಲಿಲ್ಲ. ಪೋಷಕರು ಹಾಗೂ ಸಂಬಂಧಿಕರು ಮಗುವಿಗಾಗಿ ಬೀದಿ ಬೀದಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಪೊಲೀಸರ ಸಹಾಯದಿಂದ ಅ ಪುಟ್ಟ ಕಂದಮ್ಮ ಮತ್ತೆ ತಾಯಿಯ ಮಡಿಲು ಸೇರಿದೆ.
ಕಳೆದ ಮಾರ್ಚ್ 16 ರಂದು ಚಾಮರಾಜಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಉಮೇಸಲ್ಮಾ ಇಸ್ಮಾಯಿಲ್ ಜಬೀವುಲ್ಲಾ ಅವರು ಮೊದಲ ಹೆರಿಗೆಗೆ ಬಂದಿದ್ದರು. ಹೆರಿಗೆಯಾದ ತಕ್ಷಣ ಮಗು ತೂಕ ಕಡಿಮೆ ಇರುವ ಕಾರಣಕ್ಕೆ ತೀವ್ರ ನಿಗಾ ಘಟಕದಲ್ಲಿ ಇರಿಸಿದ್ದರು. ಅಲ್ಲಿಂದ ಕಳ್ಳಿಯೊಬ್ಬಳು ಮಗುವನ್ನು ಎತ್ತಿಕೊಂಡು ಕಾಲ್ಕಿತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಸ್ಪತ್ರೆ ಸಿಬ್ಬಂದಿ ವಿರುದ್ಧ ಮಗುವಿನ ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಗು ಕಳ್ಳಿ ಭಯದಿಂದ ದಾವಣಗೆರೆಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್ನಲ್ಲಿ ಇದ್ದ ವೃದ್ಧೆಗೆ ಮಗು ನೀಡಿ ಪರಾರಿಯಾಗಿದ್ದಾಳೆ. ನಂತರ ಪೊಲೀಸರಿಗೆ ವೃದ್ಧೆ ಮಗುವನ್ನು ಒಪ್ಪಿಸಿದ್ದಾರೆ. ಅಷ್ಟೇ ಅಲ್ಲದೆ ಮಕ್ಕಳ ಕಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆಯ ಗುಲ್ಜರ್ ಬಾನು ಎನ್ನುವ ಮಹಿಳೆ ಸಿಕ್ಕಿಬಿದ್ದಿರುವ ಚಾಲಾಕಿ.
ಇದನ್ನೂ ಓದಿ: ದಾವಣಗೆರೆ ನವಜಾತ ಶಿಶು ನಾಪತ್ತೆ ಪ್ರಕರಣ: ಮಗು ಹುಡುಕಿ ಕೊಟ್ಟವರಿಗೆ ₹25 ಸಾವಿರ ಬಹುಮಾನ
ಗುಲ್ಜರ್ ಬಾನುಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಅದರಲ್ಲಿ ಮೊದಲನೆಯ ಮಗಳಿಗೆ ಮಕ್ಕಳಾಗಿರಲಿಲ್ಲ. ಇನ್ನೊಬ್ಬಳಿಗೆ ಮಕ್ಕಳಾಗಿವೆ. ಮೊದಲ ಮಗಳಿಗೆ ಮಕ್ಕಳಿಲ್ಲ ಎನ್ನುವ ಸಮಸ್ಯೆ ಪರಿಹರಿಸಲು ಈ ರೀತಿ ಮಾಡಿದ್ದಾಳೆ ಎನ್ನಲಾಗ್ತಿದೆ. ಮಗುವನ್ನು ತಾಯಿ ಮಡಿಲಿಗೆ ಸೇರಿಸಿದ ಪೊಲೀಸರಿಗೆ ಮುಸ್ಲಿಂ ಮುಖಂಡರು ಸನ್ಮಾನ ಮಾಡಿ ಅಭಿನಂದನೆ ಸಲ್ಲಿಸಿದರು. ಅಷ್ಟೇ ಅಲ್ಲದೇ, ಮಗು ನಾಪತ್ತೆಯಾಗಿರುವ ಕುರಿತು ಸುದ್ದಿ ಪ್ರಸಾರ ಮಾಡಿದ ಹಿನ್ನೆಲೆ 'ಈಟಿವಿ ಭಾರತ' ಕ್ಕೆ ಧನ್ಯವಾದ ಸಲ್ಲಿಸಿದರು.
ಇದನ್ನೂ ಓದಿ: ದಾವಣಗೆರೆ ಆಸ್ಪತ್ರೆಯಲ್ಲಿ ಜನಿಸಿದ ಎರಡು ಗಂಟೆಯಲ್ಲೇ ಗಂಡು ಶಿಶು ನಾಪತ್ತೆ