ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದ ರಸ್ತೆ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಯಡಿಯೂರಪ್ಪ ಸರ್ಕಾರ 25 ಕೋಟಿ ರೂ. ಅನುದಾನ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲು ಹೇಳಿದರು.
ಶ್ರೀಕ್ಷೇತ್ರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 5 ಕೋಟಿ ರೂ. ದೇವಳದ ಹಿಂದಿನ ರಸ್ತೆ ಹಾಗೂ ಉಲ್ಲಂಜೆಯಾಗಿ, ಕಿನ್ನಿಗೋಳಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿನಿಯೋಗಿಸಲಾಗಿದೆ. ಉಳಿದ ಹಣವನ್ನು ಅರಸುಲೆ ಪದವು, ದೇವರ ಗುಡ್ಡ ಮುಂತಾದ ಕಡೆಗಳ ರಸ್ತೆ ಅಭಿವೃದ್ಧಿಗೆ ಬಳಸಲಾಗಿದೆ. ಮೂರು ಕಾವೇರಿಯಿಂದ ಪೆರ್ಮುದೆವರೆಗಿನ ರಸ್ತೆ ಅಗಲೀಕರಣ ಕಾಮಗಾರಿಗೆ ಸುಮಾರು 10 ಕೋಟಿ ರೂ. ವೆಚ್ಚ ಮಾಡಲಾಗಿದೆ. ನಮ್ಗೆ ಇನ್ನೂ ಜಾಗದ ಅವಶ್ಯಕತೆ ಇದೆ. ಅದನ್ನು ಕ್ಷೇತ್ರಕ್ಕೆ ಭೂದಾನದ ರೂಪದಲ್ಲಿ ಯಾರಾದರೂ ಕೊಡುವವರು ಇದ್ದರೆ ಅದನ್ನು ದೇವಳದ ವತಿಯಿಂದ ಪಡೆಯಲಾಗುವುದು ಎಂದರು.
ಅಲ್ಲದೆ ಕ್ಷೇತ್ರದ ರಥಬೀದಿಯೂ ಇಕ್ಕಟ್ಟಿನಿಂದ ಕೂಡಿದೆ. ಇದಕ್ಕೂ ಈ ಬಾರಿ ಕಾಯಕಲ್ಪ ಒದಗಿಸಲಾಗಿದೆ. ಇಲ್ಲಿ ಕಾನೂನಾತ್ಮಕ ಸಮಸ್ಯೆಯೂ ಇತ್ತು. ಆದ್ದರಿಂದ ದೇವಾಲಯದ ಆಸುಪಾಸಿನಲ್ಲಿದ್ದ ಅಂಗಡಿ-ಮುಗ್ಗಟ್ಟುಗಳನ್ನು ತೆರವುಗೊಳಿಸಲು ಸುದೀರ್ಘ ಕಾಲ ಬೇಕಾಯಿತು. ಈಗ ಹೊರಗಿನ ರಸ್ತೆ ಅಗಲೀಕರಣಕ್ಕೆ ಇಲ್ಲಿನ ನಾಗರಿಕರು ನಮಗೆ ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ಕ್ಷೇತದಲ್ಲಿ ಧಾರ್ಮಿಕವಾಗಿ 12 ವರ್ಷಗಳಿಗೊಮ್ಮೆ ಆಗಬೇಕಿದ್ದ ಅಷ್ಟಬಂಧ ಕಳೆದ ವರ್ಷ ನಡೆದಿದೆ. ಬಳಿಕ ಒಂದು ವರ್ಷದ ಸುದೀರ್ಘ ಅವಧಿಯಲ್ಲಿ ಕ್ಷೇತ್ರದ ಪೂರ್ಣವಾದ ಅಭಿವೃದ್ಧಿ ಕಾರ್ಯಗಳಿಗೆ ಯೋಜನೆಗಳನ್ನು ರೂಪಿಸಿಕೊಂಡು ಬ್ರಹ್ಮಕಲಶೋತ್ಸವ ಇಂದು ಪ್ರಾರಂಭಗೊಂಡಿದೆ. ಈ ಬಾರಿ ಸ್ವರ್ಣಲೇಪಿತ ಧ್ವಜಸ್ತಂಭ ನಿರ್ಮಾಣ ಮಾಡುವ ಸಂಕಲ್ಪ ಮಾಡಿಕೊಳ್ಳಲಾಗಿದೆ. ಈಗಾಗಲೇ ಅದರ ಕಾರ್ಯ ಪೂರ್ಣಗೊಂಡಿದೆ. ಒಳಗಡೆಯ ಸುತ್ತುಪೌಳಿಯ ಸುಂದರೀಕರಣ ಮಾಡುವ ಕೆಲಸ ಪೂರ್ಣಗೊಂಡಿದೆ. ಕ್ಷೇತ್ರದಲ್ಲಿ ಸ್ಥಳಾವಕಾಶದ ಕೊರತೆ ಇರುವುದರಿಂದ ಅಗಲೀಕರಣದ ಕೆಲಸವೂ ನೆರವೇರಿದೆ. ಯಾವುದೇ ಆಯಾ, ಆಗಮ ಶಾಸ್ತ್ರಗಳಿಗೆ ಚ್ಯುತಿ ಬಾರದ ರೀತಿ ಕಾಮಗಾರಿ ಪೂರ್ಣಗೊಂಡಿದೆ ಎಂದರು.