ಮಂಗಳೂರು: ಎಲ್ಲ ವಿಚಾರದಲ್ಲಿ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬಿಟ್ ಕಾಯಿನ್ ಹಗರಣ ವಿಚಾರ ಬಂದಾಗ ಮೌನಿಯಾಗುತ್ತಾರೆ. ಅವರು ಈ ಬಗ್ಗೆ ಯಾವುದೇ ಪ್ರಶ್ನೆಗೂ ಮಾತನಾಡುವುದಿಲ್ಲ ಯಾಕೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಜನರ ಪರವಾಗಿಲ್ಲ. ಭ್ರಷ್ಟಾಚಾರದಲ್ಲಿ ಸರ್ಕಾರ ಮುಳುಗಿದೆ ಎಂಬುದನ್ನು ಅವರ ಪಕ್ಷದವರೇ ಹೇಳುತ್ತಾರೆ. ಅವರಿಗೆ ಅಭಿವೃದ್ಧಿಗಿಂತ ಕಮಿಷನ್ನಲ್ಲಿ ಮಾತ್ರ ಆಸಕ್ತಿ. ಮಾಜಿ ಸಚಿವ ಯೋಗೇಶ್ವರ್, ವಿಶ್ವನಾಥ್, ಯತ್ನಾಳ್, ರೇಣುಕಾಚಾರ್ಯ, ಮಾಧುಸ್ವಾಮಿ ತಮ್ಮದೇ ಸರ್ಕಾರದ ಬಗ್ಗೆ ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಗಂಡ - ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಜನರಿಗೆ ಈ ಸರ್ಕಾರದಿಂದ ಸಂಕಷ್ಟವಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂಬ ಪರಿಸ್ಥಿತಿ ಇದೆ. ನಳಿನ್ ಕುಮಾರ್ ಕಟೀಲ್ ಅವರಿಗೆ ಇಲ್ಲಿ ಭಾರಿ ಗೌರವ ಇದೆ ಎಂದು ತಿಳಿದುಕೊಂಡಿದ್ದೆ. ಆದರೆ, ಅವರಿಗೆ ಇಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಗೊತ್ತಾಗಿದೆ. ಕಟೀಲ್ ಅವರ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆಗಬಹುದು ಎಂದು ಯಡಿಯೂರಪ್ಪ ಹೇಳಿದ್ದರು. ಪ್ರಧಾನಿ ಮೋದಿ ನಳಿನ್ ಕುಮಾರ್ ಕಟೀಲ್ ಹೆಸರನ್ನು ವೇದಿಕೆಯಲ್ಲಿ ಹೇಳದೇ ನಿರ್ಲಕ್ಷಿಸಿದ್ದಾರೆ ಎಂದರು.
ರಾಜ್ಯದಲ್ಲಿ ನಿರುದ್ಯೋಗ ಹೆಚ್ಚಿದೆ. 2 ಲಕ್ಷ 40 ಸಾವಿರ ಉದ್ಯೋಗ ಖಾಲಿಯಿದ್ದರೂ ಈ ಸರ್ಕಾರ ಒಂದು ಉದ್ಯೋಗ ಮಾಡಿಲ್ಲ. ಪೊಲೀಸ್, ಕೆಪಿಟಿಸಿಎಲ್ ಉದ್ಯೋಗದ ನೇಮಕಾತಿ ವಿಚಾರದಲ್ಲಿ ಹಗರಣಗಳಾಗಿದೆ. ಕೆಪಿಟಿಸಿಎಲ್ ಉದ್ಯೋಗ ನೇಮಕಾತಿ ವಿಚಾರ ತನಿಖೆ ಮಾಡಿ ಅಂದರೆ ಕಾಂಗ್ರೆಸ್ ಹೆಸರು ಬರುತ್ತೆ ಅಂತಾರೆ. ಕಾಂಗ್ರೆಸ್ ಹೆಸರು ಬಂದರೆ ಒದ್ದು ಒಳಗೆ ಹಾಕಿ. ಪಿಎಸ್ಐ ಹಗರಣ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಲಿ ಎಂದು ಒತ್ತಾಯಿಸಿದರು.
ಕಾರ್ಯಕರ್ತರಿಗೆ ಬಿಜೆಪಿ ಸರ್ಕಾರದಿಂದ ದೋಖಾ: ಜಿಲ್ಲೆಗೆ ಮೋದಿ ಬಂದಾಗ ಬಹಳ ನಿರೀಕ್ಷೆ ಜನರಲ್ಲಿತ್ತು. ಡಬಲ್ ಇಂಜಿನ್ ಸರ್ಕಾರದ ಅಚ್ಚೆ ದಿನ್ ನಿರೀಕ್ಷೆ ಮಾಡಿದ್ದರು. ಕರಾವಳಿ ಭಾಗ ಅವರ ಸಿದ್ದಾಂತದ ಪ್ರಯೋಗಾಲಯ ಆಗಿರುವುದರಿಂದ ಈ ಬಗ್ಗೆ ಹೆಚ್ಚು ನಿರೀಕ್ಷೆ ಇತ್ತು. ಆದರೆ, ಅದು ಈಡೇರಲಿಲ್ಲ. ಮೋದಿ ಬಂದು ಹೋದ ಬಳಿಕ ಬಿಜೆಪಿ ಕಾರ್ಯಕರ್ತರಿಗೆ ಬಿಜೆಪಿ ಸರ್ಕಾರದಿಂದ ದೋಖಾ ಆಗಿದೆ ಎಂದು ಅಭಿಪ್ರಾಯ ಬರುತ್ತಿದೆ.
ತುಳು ಭಾಷೆಯನ್ನು 8ನೇ ಪರಿಚ್ಛೇದ ಸೇರಿಸುವ ಬೇಡಿಕೆ ಈಡೇರಿಲ್ಲ. ಪ್ರಧಾನಿ ಎಲ್ಲಿಗೇ ಹೋದರೂ ಸ್ಥಳೀಯ ಭಾಷೆಯಲ್ಲಿ ಭಾಷಣ ಆರಂಭಿಸುತ್ತಾರೆ. ಆದರೆ, ಅವರು ಮಂಗಳೂರಿನಲ್ಲಿ ಕನ್ನಡವನ್ನು ಮಾತನಾಡಿಲ್ಲ, ತುಳು ಮಾತಾಡಿಲ್ಲ ಎಂದು ಪ್ರಿಯಾಂಕ್ ಖರ್ಗೆ ತಿವಿದರು.
ಈ ಭಾಗದಲ್ಲಿ ಬಂದು ಸಿಎಂ ಅವರು ಮೋದಿ ಸಮ್ಮುಖದಲ್ಲಿ ನಾರಯಣಗುರು ನಿಗಮ ಘೋಷಿಸುವ ನಿರೀಕ್ಷೆ ಇತ್ತು. ಅದೂ ಆಗಿಲ್ಲ. ನಾರಾಯಣ ಗುರುಗಳಿಗೆ ಪದೇ ಪದೆ ಅವಮಾನ ಮಾಡುತ್ತಿದ್ದಾರೆ. ಟ್ಯಾಬ್ಲೋ ನಿರಾಕರಿಸಿದರು ಮತ್ತು ಪಠ್ಯ ಪುಸ್ತಕದಲ್ಲಿ ಅವರ ಪಾಠ ಕೈ ಬಿಟ್ಟರು. ಆದರೆ ಬಿಜೆಪಿಯವರು ಮಾತನಾಡಿಲ್ಲ.
ಕೋಲಿ ಎಸ್ಟಿ ವರ್ಗಕ್ಕೆ ಸೇರಿಸುತ್ತೇನೆ ಎಂದವರು ಅದನ್ನೂ ಮಾಡಿಲ್ಲ. ಡಬಲ್ ಇಂಜಿನ್ ಸರ್ಕಾರ ಮೂರು ವರ್ಷದಿಂದ ಕತ್ತೆ ಕಾಯುತ್ತಿದೆ. ಪ್ರವಾಹದಿಂದ ಮಲೆನಾಡು, ದಕ್ಷಿಣ ಕರ್ನಾಟಕದಲ್ಲಿ ಭಾರಿ ಹಾನಿಯಾಗಿದ್ದರೂ, ಕಳೆದ ಮೂರು ವರ್ಷದಿಂದ ಪ್ರವಾಹ ಪರಿಸ್ಥಿತಿ ಇದ್ದರೂ ಅಮಿತ್ ಶಾ ರಾಜ್ಯಕ್ಕೆ ಬಂದರೂ ಅವರಲ್ಲಿ ಕೇಳಲು ಹೋಗಿಲ್ಲ ಎಂದು ಟೀಕಿಸಿದರು.
ಯುವಕರು ಇವರ ಟ್ರ್ಯಾಪ್ಗೆ ಬೀಳಬೇಡಿ: ಬಡವರ ಮಕ್ಕಳಿಗೆ ಕೇಸರಿ ಶಾಲು ಹಾಕಿಸಿ ಧರ್ಮರಕ್ಷಣೆ ಮಾಡಿಸುವ ನಾಯಕರ ತಮ್ಮ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ, ಉದ್ಯೋಗ ಸಿಗಲು ಪ್ರಯತ್ನಿಸುತ್ತಾರೆ. ಬಿಜೆಪಿ, ಆರ್ಎಸ್ಎಸ್ನವರು ತೋಡಿದ ಹಳ್ಳಕ್ಕೆ ಬೀಳಬೇಡಿ. ಶಿವಮೊಗ್ಗ ಬಂದ್ ಆದಾಗ 300 ಕೋಟೆ ನಷ್ಟವಾಗಿತ್ತು. ಇದರಿಂದ ಜನಸಾಮಾನ್ಯರಿಗೆ ಕಷ್ಟವಾಗಲಿದೆ.
ಕರಾವಳಿ ಭಾಗದ ಜನ ಶೇ.100ರಷ್ಟು ಸಾಕ್ಷರರಾಗಿದ್ದರೂ ಇಂತವರಿಗೆ ಯಾಕೆ ಅವಕಾಶ ಕೊಡ್ತೀರಿ. ಇಲ್ಲಿ ನಾರಾಯಣ ಗುರು, ಬಸವಣ್ಣ ಚಿಂತನೆ ಬಿತ್ತಬೇಕಾಗಿದೆ. ಯುವಕರು ಇವರ ಟ್ರ್ಯಾಪ್ಗೆ ಬೀಳಬೇಡಿ. ಕರಾವಳಿಯಲ್ಲಿ ಪ್ರಗತಿಪರ, ಪ್ರಬುದ್ಧ ಸಮಾಜ ಇದು. ನೀವು ನಮಗೆಲ್ಲರಿಗೂ ಮಾದರಿ. ನೀವು ಹೀಗೆ ಮಾಡಿದರೆ ಉತ್ತರ ಕರ್ನಾಟಕದ ಜಿಲ್ಲೆಯ ಜನರಿಗೆ ಸೌಹಾರ್ದತೆ ಪಾಠ ಮಾಡುವಂತಾಗುತ್ತದೆ ಎಂದರು.
ಇದನ್ನೂ ಓದಿ: ಅಧಿಕಾರ ಇದ್ದಾಗ ಕೆಲಸ ಮಾಡದ ಸಿಎಂ.. ಕಾಂಗ್ರೆಸ್ ವಿರುದ್ಧ ವೃಥಾ ಆರೋಪ: ಡಿಕೆಶಿ ತಿರುಗೇಟು