ಬೆಳ್ತಂಗಡಿ: 2008 ರಿಂದ 2018 ರವರೆಗೆ 2000 ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದು ತಾಲೂಕಿನ 81 ಗ್ರಾಮಗಳಿಗೆ ಪ್ರಾಮಾಣಿಕವಾಗಿ ಹಂಚಿದ್ದೇನೆ. ಇದೀಗ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ನನ್ನಲ್ಲಿ ಲೆಕ್ಕ ಕೇಳುತ್ತಿದ್ದಾರೆ. ಚಂಡಿಕಾ ಯಾಗದ ಲೆಕ್ಕ ಕೇಳಿದ್ದು, ಆ ಯಾಗದ ಖರ್ಚಿಗಾಗಿ ನನ್ನ ಹೆಂಡತಿಯ ಹೆಸರಿನಲ್ಲಿದ್ದ ಜಾಗವನ್ನು ಮಾರಿದ್ದೇನೆ. ಅಲ್ಲದೇ ಈಗಲೂ ನೆರಿಯ ಹೆಬ್ಬಾರ್ ಕುಟುಂಬದವರಿಗೆ 8 ಲಕ್ಷ ರೂ. ಸಾಲ ನೀಡಲು ಬಾಕಿ ಇದೆ. ಇನ್ನೂ ಹೆಚ್ಚಿನ ಲೆಕ್ಕ ಬೇಕಿದ್ದಲ್ಲಿ ಅವರ ಅಪ್ತ ಮೂರು ಮಾರ್ಗದ ಬಳಿಯ ತೆಂಗಿನಕಾಯಿ ವ್ಯಾಪಾರಿಯೊಬ್ಬರಲ್ಲಿ ಕೇಳಲಿ. ಅವರು ಎಲ್ಲಾ ಲೆಕ್ಕವನ್ನು ನಿಮಗೆ ನೀಡುತ್ತಾರೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.
ಗುರುನಾರಾಯಣ ಸಭಾಂಗಣದಲ್ಲಿ ಕರೆದಿದ್ದ ಮಾಧ್ಯಮಗೋಷ್ಟಿ ಉದ್ದೇಶಿಸಿ ಅವರು ಮಾತನಾಡಿದರು. ನಾನು ಯಾವುದೇ ರೀತಿಯಲ್ಲಿ ಭ್ರಷ್ಟಾಚಾರ ಎಸಗಿಲ್ಲ. ಕಾಳಜಿ ರಿಲೀಫ್ ಪಂಢ್ ಲೆಕ್ಕಾಚಾರ ಪಾರದರ್ಶಕವಾಗಿದೆ ಎಂದು ವಕೀಲರೊಬ್ಬರು ಹೇಳಿದ್ದಾರೆ. ಅದರೆ ಸಂಗ್ರಹವಾದ ಹಣವನ್ನು ಬ್ಯಾಂಕ್ ಖಾತೆಯಲ್ಲಿ ಇಟ್ಟು ತಿರುಗಾಡುತ್ತಿದ್ದೀರಿ, ಅದಾಯ ತೆರಿಗೆ ಕಟ್ಟಲು ಬಂದರೆ ಅಥವಾ ತಾಲೂಕಿನ ಜನತೆಗೆ ನಷ್ಟ ಅದರೆ ಜನರಿಗೆ ಯಾವ ರೀತಿಯಲ್ಲಿ ಉತ್ತರಿಸುತ್ತೀರಿ. ಇದರ ಬಗ್ಗೆ ಯೋಚಿಸದೆ ಶಾಸಕರ ಪರವಾಗಿ ಮಾತನಾಡುತ್ತಿದ್ದೀರಿ. ವಕೀಲರಾಗಿದ್ದುಕೊಂಡು ನ್ಯಾಯದ ಪರವಾಗಿ ಇರಬೇಕಾದ ನೀವು ಜನರಿಗೆ ಈ ರೀತಿ ತಪ್ಪು ಮಾಹಿತಿ ನೀಡುವುದು ಸರಿಯಲ್ಲ, ನಿಮ್ಮ ಮೇಲೆ ನನಗೆ ಗೌರವ ಇದೆ ಎಂದು ಬಂಗೇರ ತಿಳಿಸಿದರು.
ತಾಲೂಕಿನಲ್ಲಿ ಕಳಪೆ ಕಾಮಗಾರಿಗಳ ಬಗ್ಗೆ ಇನ್ನೂ ಧ್ವನಿ ಎತ್ತುತ್ತೇನೆ. ಬೆಳಾಲ್ನಲ್ಲಿ ನಡೆದ ಕಳಪೆ ಕಾಮಾಗಾರಿ ಬಗ್ಗೆ ಅಧಿಕಾರಿಗಳು ಬಂದು ಪರಿಶೀಲಿಸಿ ಕಾಮಗಾರಿ ಕಳಪೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ರೀತಿಯ ಕಳಪೆಮಟ್ಟದ ಕಾಮಗಾರಿಗಳು ತಾಲೂಕಿನಲ್ಲಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವವರೆಗೆ ಇದರ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ ಧ್ವನಿ ಎತ್ತುತ್ತೇವೆ ಎಂದು ಎಚ್ಚರಿಕೆ ರವಾನಿಸಿದರು.
ನಾವೂರು ಸಮೀಪದ ಪುಲಿತ್ತಡಿ ಎಂಬಲ್ಲಿ ಮಲೆಕುಡಿಯ ಕುಟುಂಬದ 15 ಮನೆಗಳಿಗೆ ಎರಡು ವರ್ಷಗಳ ಹಿಂದೆ ವೋಟಿನ ಆಸೆಗಾಗಿ ವಿದ್ಯುತ್ ಹಾಕಿಸುತ್ತೇವೆ ಎಂದು ಮೀಟರ್ ಮತ್ತು ವೈರಿಂಗ್ ಮಾಡಿಸಿ ಇಷ್ಟರವರೆಗೆ ಕರೆಂಟ್ ನೀಡದೆ ಜನರಿಗೆ ಮೋಸ ಮಾಡಿದ್ದಾರೆ ಎಂದು ಬಂಗೇರ ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ, ಜಿಎಸ್ಟಿ ವಿಚಾರದಲ್ಲಿ ಕಾಂಗ್ರೆಸ್ ಶೇ.18 ಮಾಡುವಂತೆ ಪ್ರಸ್ತಾಪ ಮಾಡಿತ್ತು. ಇದಕ್ಕೆ ಬಿಜೆಪಿ ಶೇ.18 ರಿಂದ ಶೇ.38ಕ್ಕೆ ಏರಿಸಲು ಮುಂದಾಗಿದ್ದರಿಂದ ಅನುಷ್ಠಾನ ವಿಳಂಬವಾಯಿತು. ಆಗಲೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಅವರ ಮಾತಿಗೆ ಆಗ ಎಲ್ಲರೂ ವ್ಯಂಗ್ಯವಾಡಿದರು, ಅದರೀಗ ಜನರಿಗೆ ಅರ್ಥವಾಗಿದೆ. ಗರಿಷ್ಠ ಜಿಎಸ್ಟಿಯಿಂದ ತೊಂದರೆಯಾಗಿದ್ದು, ದೇಶದ ಅರ್ಥಿಕ ಸ್ಥಿತಿ ಕುಸಿದಿದೆ ಎಂದರು.
ಮಾಜಿ ಸಚಿವ ಗಂಗಾದರ ಗೌಡ ಮಾತನಾಡಿ, ತಾಲೂಕಿನ ಜನತೆಗೆ ಅನ್ಯಾಯವಾದಾಗ ಪ್ರತಿಪಕ್ಷವಾದ ಕಾಂಗ್ರೆಸ್ ಪ್ರಶ್ನಿಸುವುದರಲ್ಲಿ ತಪ್ಪೇನಿದೆ ಎಂದು ಕೇಳಿದರು.