ಬೆಳ್ತಂಗಡಿ(ದ.ಕ) : ಕುಡಿದು ಗಲಾಟೆ ಮಾಡುತ್ತಾನೆ ಎಂಬ ಕಾರಣಕ್ಕೆ ತಂದೆಯನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಮುಗ್ಗದ ಆನೆಪಲ್ಲದಲ್ಲಿ ನಡೆದಿದೆ. ಧರ್ಣಪ್ಪ ಪೂಜಾರಿ (65) ಕೊಲೆಯಾದ ವ್ಯಕ್ತಿ.
ಮಕ್ಕಳಾದ ಮೋನಪ್ಪ ಪೂಜಾರಿ(34) ಹಾಗೂ ನವೀನ್ (28) ಎಂಬುವರು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಧರ್ಣಪ್ಪ ಪೂಜಾರಿಯವರು ತೆಂಗಿನಕಾಯಿ ಮಾರಾಟ ಮಾಡಿಕೊಂಡಿದ್ದರು. ಅದಲ್ಲದೇ ವಿಪರೀತ ಕುಡಿದು ಮನೆಯಲ್ಲಿ ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಮಕ್ಕಳಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಭಾನುವಾರ ಮಧ್ಯರಾತ್ರಿಯೂ ಇದೇ ವಿಚಾರಕ್ಕೆ ತಂದೆ ಮಕ್ಕಳ ನಡುವೆ ಜಗಳವಾಗಿದೆ. ಈ ಸಂದರ್ಭ ಜಗಳ ವಿಕೋಪಕ್ಕೆ ಹೋಗಿ ತಂದೆಯನ್ನು ಮಕ್ಕಳೇ ಕೊಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಧರ್ಣಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಉಪ್ಪಿನಂಗಡಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.