ಮಂಗಳೂರು: ವಿಚಾರಣೆಯ ನೆಪದಲ್ಲಿ ಠಾಣೆಗೆ ಕರೆದು ಮೂವರ ಮೇಲೆ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಬಜ್ಪೆ ಠಾಣಾಧಿಕಾರಿ ಸಂದೇಶ್ ಪಿ. ಜಿ ಹಾಗೂ ಮೂವರು ಪೊಲೀಸರನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಕಟೀಲು ದೇವಳದ ಅಂಗಡಿಗೆ ವ್ಯಕ್ತಿಯೊಬ್ಬರು ನೀಡಿರುವ ಸೀಯಾಳದ ಬಗ್ಗೆ ಶ್ರೀರಾಮ ಸೇನೆಯ ಮಹೇಶ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬಜ್ಪೆ ಪೊಲೀಸರು ಮಹೇಶ್ ಅವರನ್ನು ಠಾಣೆಗೆ ವಿಚಾರಣೆಗೆ ಎಂದು ಕರೆಸಿದ್ದರು. ಈ ವಿಚಾರ ತಿಳಿದು ದಿನೇಶ್ ಹಾಗೂ ದುರ್ಗಾಚರಣ್ ಎಂಬುವರು ಠಾಣೆಗೆ ಬಂದು ವಿಚಾರಿಸಿದ್ದಾರೆ.
ಈ ಸಂದರ್ಭ ಪೊಲೀಸರು ಈ ಮೂವರ ಮೇಲೆ ಠಾಣೆಯಲ್ಲಿ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಮಹೇಶ್ ಹಾಗೂ ದಿನೇಶ್ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ದುರ್ಗಾಚರಣ್ ಕಟೀಲು ಸಂಜೀವಿನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಪ್ರಕರಣವನ್ನು ಎಸಿಪಿ ಮಹೇಶ್ ಕುಮಾರ್ ತನಿಖೆ ನಡೆಸಿದ್ದು, ಠಾಣೆಯಲ್ಲಿ ದೌರ್ಜನ್ಯ ಎಸಗಿರುವುದು ಸಾಬೀತಾಗಿದೆ.
ಈ ಹಿನ್ನೆಲೆಯಲ್ಲಿ ಉಳಿದ ಇಲಾಖಾ ಶಿಸ್ತುಕ್ರಮ ಹಾಗೂ ಇಲಾಖಾ ವಿಚಾರಣೆಯನ್ನು ಬಾಕಿಯಿರಿಸಿ ಬಜ್ಪೆ ಠಾಣಾಧಿಕಾರಿ ಸಂದೇಶ್ ಪಿ. ಜಿ ಹಾಗೂ ಮೂವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶಿಸಿದ್ದಾರೆ.
ಓದಿ: ಪ್ರಿಯಾಂಕ್ ಖರ್ಗೆಗೆ ನೋಟಿಸ್ ; ಸರ್ಕಾರಕ್ಕೆ ಡಿ. ಕೆ ಶಿವಕುಮಾರ್ ತರಾಟೆ