ಮಂಗಳೂರು : ನಗರದ ನೀರುಮಾರ್ಗ ಎಂಬಲ್ಲಿನ ಜಂಕ್ಷನ್ ಸಮೀಪದಲ್ಲಿರುವ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರಕ್ಕೆ ಕಳ್ಳರು ನುಗ್ಗಿ ದೇವಸ್ಥಾನದ ಕಾಣಿಕೆ ಹುಂಡಿ ದೋಚಿದ್ದಾರೆ. ಖದೀಮರ ಈ ಕೃತ್ಯ ಭಜನಾ ಮಂದಿರದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇಬ್ಬರು ಖದೀಮರು ಭಜನಾ ಮಂದಿರದ ಮುಂಭಾಗಕ್ಕೆ ನಸುಕಿನ ವೇಳೆ 1.45ರ ಸುಮಾರಿಗೆ ನುಗ್ಗಿದ್ದಾರೆ. ಬಳಿಕ ಇಬ್ಬರೂ ಸೇರಿ ಪ್ರಧಾನ ಗುಡಿಯ ಮುಂಭಾಗದಲ್ಲಿರುವ ಕಾಣಿಕೆ ಡಬ್ಬಿಯನ್ನು ಹೊರಗೆ ಸಾಗಿಸಿದ್ದಾರೆ. ಖದೀಮರ ಚಲನವಲನಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಜಾನ್ಸನ್ ಮತ್ತು ಸಿಬ್ಬಂದಿ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದೆ. ಸಿಸಿ ಕ್ಯಾಮೆರಾ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.