ಪುತ್ತೂರು(ದಕ್ಷಿಣ ಕನ್ನಡ): ಕೆಮ್ಮಾಯಿ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ, ಬೀಡಿ ಬ್ರ್ಯಾಂಚ್ ಸೇರಿದಂತೆ ಸ್ಥಳೀಯ 4 ಅಂಗಡಿಗಳಲ್ಲಿ ಕಳ್ಳರು ಕೈಚಳಕ ತೋರಿಸಿರುವ ಘಟನೆ ಇಂದು ಬೆಳಕಿಗೆ ಬಂದಿದೆ.
![Theft](https://etvbharatimages.akamaized.net/etvbharat/prod-images/10210398_theft.jpg)
ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದ ಹಿಂಬದಿಯ ಗೋಪುರದಿಂದ ದೇವಳದ ಒಳಾಂಗಣಕ್ಕೆ ಇಳಿದ ಕಳ್ಳರು ದೇವರ ಗರ್ಭಗುಡಿಯ ಬಾಗಿಲು ಮುರಿದು ಒಳ ನುಗ್ಗಿದ್ದಾರೆ. ಬಳಿಕ ದೇವರ ಬೆಳ್ಳಿಯ ಮಾಲೆಯನ್ನು ಕಳವು ಮಾಡಿದ್ದಾರೆ. ಉಳಿದಂತೆ ದೇವಳದ ಕಾಣಿಕೆ ಹುಂಡಿಯಿಂದ ಹಣ ಕದ್ದಿದ್ದಾರೆ. ಜ. 11 ರಂದು ಕಾಣಿಕೆ ಹುಂಡಿ ಲೆಕ್ಕಾಚಾರ ಆಗಿರುವ ಹಿನ್ನೆಲೆ, ಹುಂಡಿಯಿಂದ ಹಣ ಕಳ್ಳತನವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ದೇವಳದ ಎದುರಿನ ಅಂಗಡಿಯಿಂದ ಸಾವಿರಾರು ರೂಪಾಯಿ ಕಳವು:
ದೇವಳದ ಎದುರಿನಲ್ಲಿದ್ದ ತಿಮ್ಮಪ್ಪ ಗೌಡ ಎಂಬುವರ ಅಂಗಡಿಯ ಹಿಂಬದಿಯಿಂದ ಒಳನುಗ್ಗಿರುವ ಖದೀಮರು, ಸ್ವ ಸಹಾಯ ಸಂಘದ ಸಂಗ್ರಹದ 30 ಸಾವಿರ ರೂ. ನಗದು ಮತ್ತು ಇತರೆ ಚಿಲ್ಲರೆ ಹಣ ಎಗರಿಸಿದ್ದಾರೆ. ಜಂಕ್ಷನ್ ಅಂಗಡಿಯಲ್ಲೂ ಕಳ್ಳತನಕ್ಕೆ ಯತ್ನಿಸಿದ್ದಾರೆ. ಕೆಮ್ಮಾಯಿ ಜಂಕ್ಷನ್ ಬಳಿಯ ಬರ್ನಾಂಡಿಸ್ ಮತ್ತು ಲಿಂಗಪ್ಪ ಎಂಬುವರ ಅಂಗಡಿಗೆ ನುಗ್ಗಿದ ಕಳ್ಳರು ದುಷ್ಕೃತ್ಯಕ್ಕೆ ಯತ್ನಿಸಿದ್ದು, ಚಿಲ್ಲರೆ ಹಣ ಕದ್ದೊಯ್ದಿದ್ದಾರೆ. ಬೀಡಿ ಬ್ರ್ಯಾಂಚ್ನಲ್ಲೂ ಕಳ್ಳತನವಾಗಿದೆ ಎನ್ನಲಾಗ್ತಿದೆ.