ಮಂಗಳೂರು: ನಗರದ ಪಡುಪೆರಾರ ಗ್ರಾಮದ ಶ್ರೀನಿರಂಜನ ಸ್ವಾಮಿ ಪಾಲಿಟೆಕ್ನಿಕ್ ಕಾಲೇಜಿನ ಕಪಾಟು ಬೀಗ ಒಡೆದು ಸಂಗ್ರಹಿಸಿಟ್ಟಿದ್ದ ವಿದ್ಯಾರ್ಥಿಗಳ ಶುಲ್ಕ ಹಣ 5,41,000 ರೂಪಾಯಿಯನ್ನು ಕಳ್ಳರು ಕದ್ದೊಯ್ದಿದ್ದಾರೆ.
ಪ್ರಾಂಶುಪಾಲೆ ಶಶಿಪ್ರಭಾ ಎನ್. ಅವರು ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಅಭಿವೃದ್ಧಿ ಶುಲ್ಕವನ್ನು ಕಾಲೇಜಿನ ಸಿಬ್ಬಂದಿ ಹೇಮಲತಾ ಮತ್ತು ದಿನೇಶ್ ಮಾಣೈ ಕೆ. ಅವರ ಸಮಕ್ಷಮದಲ್ಲಿ ಸ್ಟೀಲ್ ಕಪಾಟಿನಲ್ಲಿಟ್ಟು ಬೀಗ ಹಾಕಿ ಮನೆಗೆ ತೆರಳಿದ್ದರು. ಆದರೆ, ಮರುದಿನ ಬೆಳಗ್ಗೆ ಕಚೇರಿ ಸಿಬ್ಬಂದಿ ಆನಂದ ಪೂಜಾರಿ ಕಾಲೇಜಿನ ಬೀಗ ತೆಗೆದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಕಚೇರಿಯ ಕಪಾಟಿನ ಬೀಗ ಒಡೆದು ಹಣ, ಪೆನ್ಡ್ರೈವ್ ಮತ್ತು ಬೀಗದ ಗೊಂಚಲನ್ನು ಕಳ್ಳರು ತೆಗೆದುಕೊಂಡು ಹೋಗಿದ್ದಾರೆ.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.