ಮಂಗಳೂರು : ಹೊಸ ವರ್ಷದ ಸಂಭ್ರಮಾಚರಣೆಗೆಂದು ಬಂದಿದ್ದ ವೇಳೆ ಸಮುದ್ರ, ನದಿ ಸಂಗಮದ ಸ್ಥಳದಲ್ಲಿ ಮೋಜು ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗುತ್ತಿದ್ದ ತನ್ನಿಬ್ಬರು ಮಕ್ಕಳನ್ನು ರಕ್ಷಿಸಿ ತಂದೆ ಪ್ರಾಣಬಿಟ್ಟ ಘಟನೆಯ ವಿಡಿಯೋ ವೈರಲ್ ಆಗಿದೆ.
ಡಿಸೆಂಬರ್ 31ರಂದು ಕಡಬದ ಜಯರಾಮಗೌಡ ಎಂಬುವರು ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಮೂಲ್ಕಿಯ ಚಿತ್ರಾಪು ರೆಸಾರ್ಟ್‌ಗೆ ಬಂದಿದ್ದರು. ಈ ವೇಳೆ ಜಯರಾಮಗೌಡ ಅವರು ರೆಸಾರ್ಟ್ ಸನಿಹದಲ್ಲಿ ಇರುವ ಸಮುದ್ರ, ನದಿ ಸಂಗಮ ಸ್ಥಳಕ್ಕೆ ಬಂದು ಮೋಜಿನಲ್ಲಿ ತೊಡಗಿದ್ದಾರೆ.
ನಂದಿನಿ ಮತ್ತು ಶಾಂಭವಿ ನದಿಗಳು ಸಮುದ್ರ ಸೇರುವ ಈ ಜಾಗದಲ್ಲಿ ಐವರು ಮೋಜು ಮಾಡುತ್ತಿದ್ದ ವೇಳೆ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಐವರು ಮುಳುಗುತ್ತಿದ್ದ ವೇಳೆ ಮಂತ್ರ ಸರ್ಫಿಂಗ್ ಕ್ಲಬ್‌ನ ಶ್ಯಾಮ್ ಅವರು ಇಬ್ಬರು ಸದಸ್ಯರೊಂದಿಗೆ ಅಲ್ಲಿಗೆ ಬಂದಿದ್ದಾರೆ. ಮುಳುಗವವರನ್ನು ಅವರು ರಕ್ಷಣೆ ಮಾಡಲು ಆರಂಭಿಸಿದ್ದಾರೆ.
ಜಯರಾಮ ಗೌಡರು ಈ ವೇಳೆ ತಾನು ಮುಳುಗುತ್ತಿದ್ದರು, ತನ್ನಿಬ್ಬರು ಮಕ್ಕಳನ್ನು ಕೆಲವು ನಿಮಿಷಗಳ ಕಾಲ ಎತ್ತಿಕೊಂಡು ಪ್ರಾಣ ರಕ್ಷಣೆ ಮಾಡಿದ್ದಾರೆ. ಈ ವೇಳೆ ರಕ್ಷಣೆಗೆ ಬಂದವರು ಜಯರಾಮಗೌಡರ ಕೈಯಲ್ಲಿದ್ದ ಮಗುವನ್ನು ರಕ್ಷಿಸಿ ತಮ್ಮ ದೋಣಿಗೆ ಹಾಕಿದ್ದಾರೆ. ಬಳಿಕ ಮತ್ತೊಂದು ಮಗು ಮತ್ತು ಮಹಿಳೆಯನ್ನು ರಕ್ಷಿಸಿದ್ದಾರೆ. ಆದರೆ, ಜಯರಾಮಗೌಡರು ನೀರಿನಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.
ಓದಿ : ಹೊಸ ವರ್ಷದ ಸಂಭ್ರಮ: ಮುಲ್ಕಿಯ ಚಿತ್ರಾಪು ರೆಸಾರ್ಟ್ ಬಳಿ ಬಂದ ವ್ಯಕ್ತಿ ಹೊಳೆ ಪಾಲು
ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿಯಂತೆ ಮಗುವನ್ನು ಕೈಯಲ್ಲಿ ಎತ್ತಿ ರಕ್ಷಿಸಲು ಪ್ರಯತ್ನಿಸಿದ ಜಯರಾಮಗೌಡರು ತಾವು ಬದುಕುಳಿಯಲು ಯತ್ನಿಸಿದ್ರೂ ಅದು ಸಾಧ್ಯವಾಗಿಲ್ಲ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.