ಮಂಗಳೂರು (ದಕ್ಷಿಣ ಕನ್ನಡ): ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ಸಿ.ಡಿ. ಅವರನ್ನು ತಮ್ಮ ಹುದ್ದೆಯಿಂದ ಅಮಾನತು ಮಾಡಲಾಗಿದೆ. ಇತ್ತೀಚಿಗೆ ನಡೆದ ಚುನಾವಣಾ ಕರ್ತವ್ಯದ ವೇಳೆ ಅವರು ಲೋಪ ಎಸಗಿದ್ದಾರೆ ಎಂಬ ಆರೋಪವಿದ್ದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅಮಾನತು ಆದೇಶ ಹೊರಡಿಸಿದ್ದಾರೆ.
ಆದರೆ ತಮ್ಮ ಮೇಲೆ ಮಾಡಲಾದ ಆರೋಪಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಣ್ಣ ನಿರಾಕರಿಸಿದ್ದರು. ಜಯಣ್ಣ ಅವರು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಹೊರಡಿಸಿದ ನೋಟಿಸ್ಗೆ ಮೇ 22 ರಂದು ಲಿಖಿತ ಉತ್ತರ ನೀಡಿದ್ದರು. ಈ ಉತ್ತರ ಸಮಾಧಾನ ತರಲಿಲ್ಲ ಎಂಬ ಕಾರಣದಿಂದ ಡಿಡಿಪಿಯುವರನ್ನು ಅಮಾನತು ಮಾಡಲಾಗಿದೆ.
ಸದ್ಯ ಕೊಕ್ಕಡ ಪಿಯು ಕಾಲೇಜು ಪ್ರಾಂಶುಪಾಲ ವೆಂಕಟೇಶಮೂರ್ತಿ ಅವರನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಭಾರಿಯಾಗಿ ನೇಮಕ ಮಾಡಲಾಗಿದೆ. ಜಿಲ್ಲಾಧಿಕಾರಿ ಮೇ 9 ರಂದು ಚುನಾವಣೆಯ ಪೂರ್ವ ಸಿದ್ಧತೆ ಕುರಿತಂತೆ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ವೇಳೆ ಹಾಜರಿರುವಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಜಯಣ್ಣ ಅವರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದರು. ಆಗ ಪೋನ್ ಸ್ವೀಕರಿಸಿದ ಜಯಣ್ಣ ಅವರು ತಾನು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ದಾಖಲೆಗಳನ್ನು ಸಲ್ಲಿಸಲು ಬೆಂಗಳೂರಿಗೆ ತೆರಳುತ್ತಿದ್ದೇನೆ. ಹಾಗಾಗಿ ಪತ್ರಿಕಾಗೋಷ್ಠಿಗೆ ಹಾಜರಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.
ಚುನಾವಣಾ ಪ್ರಕ್ರಿಯೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಯ ಅನುಮತಿ ಪಡೆಯದೆ ಜಿಲ್ಲಾ ಕೇಂದ್ರವನ್ನು ತೊರೆಯುವ ಮೂಲಕ ಜಯಣ್ಣ ಅವರು ಚುನಾವಣಾ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಜಿಲ್ಲಾಧಿಕಾರಿ ನೋಟಿಸ್ ನೀಡಿದ್ದರು. ಇನ್ನು ಪದವಿ ಪೂರ್ವ ಕಾಲೇಜುಗಳಲ್ಲಿನ ಮತಗಟ್ಟೆಗಳನ್ನು ಮೇ 9 ಮತ್ತು 10 ರಂದು ತೆರೆದಿಡಬೇಕಾಗಿತ್ತು. ಈ ಬಗ್ಗೆ ಕಾಲೇಜುಗಳಿಗೆ ಮಾಹಿತಿಯನ್ನು ನೀಡಬೇಕಾಗಿತ್ತು. ಆದರೆ, ಡಿಡಿಪಿಯು ಜಯಣ್ಣ ಅವರು ಸಮರ್ಪಕ ಮಾಹಿತಿ ನೀಡದ ಕಾರಣದಿಂದ ಚುನಾವಣಾ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳುವಾಗ ವಿಳಂಬವಾಗಿತ್ತು. ಈ ಕಾರಣದಿಂದಾಗಿ ಜಿಲ್ಲಾ ಚುನಾವಣಾ ಆಧಿಕಾರಿಗೆ ಮಾಹಿತಿ ನೀಡದೆ ಕೇಂದ್ರ ಸ್ಥಾನ ತೊರೆದಿರುವುದು ಜಯಣ್ಣ ಅವರ ಕರ್ತವ್ಯ ಲೋಪ ಎಂದು ಜಿಲ್ಲಾಧಿಕಾರಿಗಳ ನೋಟಿಸ್‌ನಲ್ಲಿ ಹೇಳಲಾಗಿದೆ.
ಸೆಲ್ಫಿ ತೆಗೆದಿದ್ದಕ್ಕೆ ದೈಹಿಕ ಶಿಕ್ಷಕನ ಅಮಾನತು: ವಿಧಾನಸಭಾ ಚುನಾವಣೆ ಸಂಬಂಧ ದೈಹಿಕ ಶಿಕ್ಷಣ ಅಂಜನ್ ಕುಮಾರ್ ಅವರನ್ನು ಸೋಲೂರು ಹೋಬಳಿಯಲ್ಲಿ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ನಲ್ಲಿ ಎಸ್.ಎಸ್.ಟಿ ತಂಡದ ಮುಖ್ಯಸ್ಥರಾಗಿ ನೇಮಿಸಲಾಗಿತ್ತು. ನಿತ್ಯ ಮಧ್ಯಾಹ್ನ 2 ರಿಂದ ರಾತ್ರಿ 10 ರವರೆಗೆ ಕಾರ್ಯನಿರ್ವಹಿಸುವ ಸಮಯದಲ್ಲಿ ಅಂಜನ್ ಕುಮಾರ್ ರಾಜಕೀಯ ಪಕ್ಷದ ಪ್ರತಿನಿಧಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದರು. ಇದರಿಂದ ಆ ವ್ಯಕ್ತಿಯನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದರು.
ಇದನ್ನೂ ಓದಿ: ನೊಂದವರ ಕಣ್ಣೀರು ಒರೆಸುವುದು ನನ್ನ ಗುರಿ: ನೂತನ ಪೊಲೀಸ್ ಆಯುಕ್ತ ಬಿ.ದಯಾನಂದ್