ಮಂಗಳೂರು: ಲಾಕ್ಡೌನ್ ವೇಳೆ ಸರ್ಕಾರದ ಪಡಿತರ ಅಕ್ಕಿಗೆ ಬೇಡಿಕೆ ಹೆಚ್ಚಿರುತ್ತದೆ. ಈ ಕಾರಣದಿಂದ ರೇಶನ್ ಅಂಗಡಿ ಮುಂಭಾಗದಲ್ಲಿ ಸರತಿ ಸಾಲು ಕಾಣಿಸಿಕೊಳ್ಳುತ್ತದೆ. ಈ ಸರತಿ ಸಾಲಿನಲ್ಲಿ ನಿಲ್ಲುವವರಿಗೆ ಆಯಾಸವಾಗದಂತೆ ಮಂಗಳೂರಿನ ಮಣ್ಣಗುಡ್ಡೆಯಲ್ಲಿರುವ ಪಡಿತರ ಅಂಗಡಿಯಲ್ಲಿ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ.
ಪಡಿತರ ಖರೀದಿಗೆಂದು ಬರುವವರಿಗೆ ನ್ಯಾಯಬೆಲೆ ಅಂಗಡಿ ಮಾಲೀಕ ಸುಕುಮಾರ್ ಶೆಟ್ಟಿ ಅವರು ಆಸನದ ವ್ಯವಸ್ಥೆ ಮಾಡಿದ್ದಾರೆ. ಸಾಧಾರಣವಾಗಿ ಪಡಿತರ ಅಂಗಡಿಗಳಲ್ಲಿ ಉದ್ದುದ್ದ ಕ್ಯೂ ಇರುತ್ತದೆ. ಈ ಸಾಲಿನಲ್ಲಿ ಬಂದೇ ಪಡಿತರ ಪಡೆಯಬೇಕು. ಆದರೆ ಇಲ್ಲಿ ಸಾಲಿನಲ್ಲಿ ಇರಬೇಕಾದರೂ ನಿಂತುಕೊಂಡಿರಬೇಕಿಲ್ಲ. 45 ಕುರ್ಚಿಗಳನ್ನು ಅಂಗಡಿಯ ಮುಂಭಾಗದ ರಸ್ತೆ ಬದಿಯಲ್ಲಿ ಇಡಲಾಗಿದೆ. ಇದರಲ್ಲಿ ಕುಳಿತುಕೊಂಡೇ ಸಾಲಿನಲ್ಲಿ ಇರಬಹುದಾಗಿದೆ.
ಲಾಕ್ ಡೌನ್ ವೇಳೆಯಲ್ಲಿ ಪಡಿತರ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಬರುತ್ತಾರೆ. ಕೆಲಸವಿಲ್ಲದೆ ಮನೆಯಲ್ಲಿ ಇರಬೇಕಾದ ಪರಿಸ್ಥಿತಿ ಇರುವುದರಿಂದ ಬಡ, ಮಧ್ಯಮ ವರ್ಗದ ಜನರಿಗೆ ಬದುಕಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಪಡಿತರ ಅನಿವಾರ್ಯ. ಇದಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವವರಿಗೆ ಅನುಕೂಲಕ್ಕಾಗಿ ನ್ಯಾಯಬೆಲೆ ಅಂಗಡಿ ಮಾಲೀಕ ಮಾಡಿದ ವ್ಯವಸ್ಥೆ ಪ್ರಶಂಸೆಗೆ ಪಾತ್ರವಾಗಿದೆ.