ಸುಬ್ರಹ್ಮಣ್ಯ (ದ.ಕ): ದಾರಿ ತಪ್ಪಿ ಸುಬ್ರಹ್ಮಣ್ಯ ತಲುಪಿದ್ದ ವೃದ್ಧೆಯನ್ನು ಅವರ ಕುಟುಂಬಸ್ಥರಿಗೆ ಒಪ್ಪಿಸುವಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಎಸ್ಐ ಯಶಸ್ವಿಯಾಗಿದ್ದಾರೆ.
ಸುಮಾರು 85 ವರ್ಷದ ಅನ್ನಪೂರ್ಣ ಎಂಬ ಅಜ್ಜಿ ದಾರಿ ತಪ್ಪಿ ಬೆಂಗಳೂರಿನಿಂದ ನೆಟ್ಟಣ ರೈಲು ನಿಲ್ದಾಣಕ್ಕೆ ಬಂದು ಕುಕ್ಕೆ ಸುಬ್ರಹ್ಮಣ್ಯ ಸೇರಿದ್ದರು. ವಿಷಯ ತಿಳಿಯದ ವೃದ್ಧೆಯ ಮನೆಯವರು ತಾಯಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಈ ನಡುವೆ ಸುಬ್ರಹ್ಮಣ್ಯದಲ್ಲಿ ವೃದ್ಧೆಯೊಬ್ಬರು ಅಲೆದಾಡುತ್ತಿರುವುದನ್ನು ಗಮನಿಸಿದ ಸುಬ್ರಹ್ಮಣ್ಯ ಠಾಣಾಧಿಕಾರಿ ಓಮನಾ ಅವರು ಅಜ್ಜಿಯನ್ನು ರಕ್ಷಿಸಿ, ಈ ಮಾಹಿತಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಇದನ್ನು ಗಮನಿಸಿದ ವೃದ್ಧೆಯ ಮನೆಯವರು ಎಸ್ಐ ಓಮನಾ ಅವರಿಗೆ ದೂರವಾಣಿ ಮೂಲಕ ವೃದ್ಧೆ ಕಾಣೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಕಾಣೆಯಾದ ವೃದ್ಧೆ ಇವರೇ ಎಂಬುದನ್ನು ಖಾತ್ರಿಪಡಿಸಿದ ಎಸ್ಐ ಓಮನಾ ಬೆಂಗಳೂರಿನ ವೃದ್ಧೆಯ ಮನೆಯವರಿಗೆ ವಿಷಯ ತಿಳಿಸಿ ಸುಬ್ರಹ್ಮಣ್ಯಕ್ಕೆ ಬರುವಂತೆ ಸೂಚಿಸಿದ್ದಾರೆ.
ವೃದ್ಧೆ ಅನ್ನಪೂರ್ಣ ಅವರಿಗೆ ಅವರ ಕುಟುಂಬಸ್ಥರು ಬರುವವರೆಗೂ ಊಟ ವಸತಿ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಬಳಿಕ ವೃದ್ಧೆಯನ್ನ ಮಗನ ಜೊತೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಸೋಂಕಿದ್ದರೂ ಮನೆಗೆ ಬಂದ ಅಣ್ಣನ ಕೊಂದ ತಮ್ಮ!