ಮಂಗಳೂರು: ಪುತ್ತೂರು ಗ್ಯಾಂಗ್ ರೇಪ್ ಪ್ರಕರಣದ ಸಂತ್ರಸ್ತೆಗೆ ಶಿಕ್ಷಣ ಮುಂದುವರಿಸಲು ರಾಷ್ಟ್ರೀಯ ಮಹಿಳಾ ಆಯೋಗದಿಂದ ವ್ಯವಸ್ಥೆ ಮಾಡಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲ ಕುಂದರ್ ತಿಳಿಸಿದ್ದಾರೆ.
ಪುತ್ತೂರು ಗ್ಯಾಂಗ್ ರೇಪ್ ಸಂತ್ರಸ್ತೆ ಮನೆಗೆ ಮತ್ತು ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಬಳಿಕ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಪ್ರಕರಣ ಬೆಳಕಿಗೆ ಬಂದ ದಿನವೇ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ಸಂತ್ರಸ್ತೆಗೆ ಉತ್ತಮ ಶಿಕ್ಷಣ ಮಾಡಬೇಕೆಂಬ ಕನಸಿತ್ತು. ಆಕೆಯ ತಾಯಿಗೂ ಕೂಡ ಮಗಳು ಅಧಿಕಾರಿ ಆಗಬೇಕು ಎಂಬ ಕನಸಿತ್ತು. ಆದರೆ ಗ್ಯಾಂಗ್ ರೇಪ್ ಪ್ರಕರಣ ಬಯಲಿಗೆ ಬಂದ ಬಳಿಕ ಆಕೆಯ ತಾಯಿ ಮತ್ತು ಸಂತ್ರಸ್ತೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಆಕೆಯ ಸಹೋದರ ಕೂಡ ಶಾಲೆಗೆ ಹೋಗುತ್ತಿಲ್ಲ. ಘಟನೆ ಬಳಿಕ ಹೊರಬರಲಾರದಂತಹ ಸ್ಥಿತಿ ಅವರದಾಗಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಧೈರ್ಯ ತುಂಬಲಾಗಿದೆ. ಅವರಿಗೆ ಕೌನ್ಸಲಿಂಗ್ ಮಾಡಿ ಧೈರ್ಯ ತುಂಬಲಾಗುವುದು. ಸಂತ್ರಸ್ತೆಗೆ ಬೇರೆ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಆಯೋಗ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಮನೆಯಲ್ಲಿ ಹೆಣ್ಣು ಮಕ್ಕಳ ಬಗ್ಗೆ ತಂದೆ ತಾಯಿಗೆ ಇರುವ ಕಾಳಜಿಯಂತೆ ಗಂಡು ಮಕ್ಕಳ ಬಗ್ಗೆ ಇರಬೇಕು. ಅವರು ಇಡೀ ದಿನ ಏನು ಮಾಡಿದ್ದಾರೆ ಎಂದು ವಿಚಾರಿಸುವುದು ಮತ್ತು ಅವರಿಗೆ ಯಾವ ರೀತಿ ಇರಬೇಕು ಎಂಬ ವಿಚಾರವನ್ನು ಮನೆಯವರು ತಿಳಿಸಬೇಕು. ಇಲ್ಲದಿದ್ದರೆ ಘಟನೆ ಬಳಿಕ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಹೇಳಿದ್ದಾರೆ.