ಬಂಟ್ವಾಳ(ದಕ್ಷಿಣ ಕನ್ನಡ): ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಬಂಟ್ವಾಳದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಶನಿವಾರ ಬೆಳಗ್ಗೆ ನೀರಿನ ಮಟ್ಟ 3.8 ಮೀ.ನಷ್ಟು ಹೆಚ್ಚಳವಾಗಿದೆ.
ಘಟ್ಟ ಪ್ರದೇಶದಲ್ಲಿ ಮಳೆಯಾದಾಗ ನೇತ್ರಾವತಿ, ಕುಮಾರಧಾರಾ ನದಿಗಳು ಹಾಗೂ ಅದರ ಉಪನದಿಗಳಲ್ಲಿ ನೀರು ಹೆಚ್ಚಾಗುತ್ತದೆ. ಉಪ್ಪಿನಂಗಡಿ ಸಂಗಮದಿಂದ ಎರಡೂ ನದಿಗಳು ಒಂದಾಗಿ ಹರಿಯುತ್ತವೆ. ನೀರಿನ ಹರಿವು ಹೆಚ್ಚಳವಾಗುತ್ತಿದ್ದಂತೆ ತುಂಬೆ ಡ್ಯಾಂನಲ್ಲಿ 30ರಲ್ಲಿ 11 ಗೇಟ್ಗಳನ್ನು ತೆರೆಯಲಾಗಿದೆ. ಮಳೆಗಾಲದಲ್ಲಿ ಬಂಟ್ವಾಳ ತಾಲೂಕು ಆಡಳಿತವು ಗೂಡಿನಬಳಿ ಸಮೀಪದಲ್ಲಿರುವ ಅಳತೆ ಮಾಪನದ ಮೂಲಕ ನೀರಿನ ಮಟ್ಟ ಪರೀಕ್ಷಿಸುತ್ತಿದ್ದು, ಜೂನ್ ಆರಂಭದಲ್ಲಿ 4 ಮೀ. ಗಳಿಗಿಂತಲೂ ಹೆಚ್ಚಿತ್ತು.
ಬಂಟ್ವಾಳದ ಮೇಲ್ಭಾಗದಲ್ಲಿರುವ ಶಂಭೂರು ಎಎಂಆರ್ ಅಣೆಕಟ್ಟಿನಲ್ಲಿ ವಿದ್ಯುತ್ ಉತ್ಪಾದನೆ ನಡೆಯುತ್ತಿದ್ದು, ನೀರಿನ ಹೊರ ಹರಿವು ಹೆಚ್ಚಾಗಿದೆ. ಬಂಟ್ವಾಳದಲ್ಲಿ ನೀರಿನ ಮಟ್ಟ 8.5 ಮೀ.ಕ್ಕಿಂತ ಹೆಚ್ಚಾದ್ರೆ ಆತಂಕಪಡುವ ಸಾಧ್ಯತೆಗಳು ಹೆಚ್ಚಿವೆ. ಮಳೆಯ ತೀವ್ರತೆ ಹೆಚ್ಚಾದ್ರೆ ನೀರು ಏರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.