ಪುತ್ತೂರು: ವಿವಿಧ ತಳಿಯ ಗೇರು ಸಸಿಗಳ ಸಂಶೋಧನೆಯಲ್ಲಿ ಅಮೂಲಾಗ್ರ ಆವಿಷ್ಕಾರ ಮಾಡಿರುವ ಪುತ್ತೂರಿನ ಗೇರು ಸಂಶೋಧನಾ ನಿರ್ದೇಶನಾಲಯ ಈ ಬಾರಿ ಮತ್ತೊಂದು ಗೇರು ಸಸಿಯನ್ನು ಪರಿಚಯಿಸುವ ಮೂಲಕ ವಿಶಿಷ್ಟ ಸಾಧನೆ ತೋರಿದೆ.
ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ (ಐಸಿಎಆರ್) ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ (ಡಿಸಿಆರ್) ಹೊಸ ತಳಿಯ ಗೇರು ಬೀಜದ ಸಂಶೋಧನೆ ಮಾಡಲಾಗಿದೆ. ದೊಡ್ಡಗಾತ್ರದ ಬೀಜವಿರುವ ಈ ತಳಿಯನ್ನು ನೇತ್ರಾ ಜಂಬೋ-1 ಎಂದು ಹೆಸರಿಡಲಾಗಿದ್ದು, ಈ ವಿಶಿಷ್ಟ ತಳಿಯಿಂದ ಮುಂದಿನ ದಿನಗಳಲ್ಲಿ ಗೇರು ಬೆಳೆಗಾರರು ಉತ್ತಮ ಫಸಲು ಹಾಗೂ ಆದಾಯವನ್ನು ನಿರೀಕ್ಷಿಸಬಹುದಾಗಿದೆ.
ಅಧಿಕ ತೂಕ ಹೊಂದಿರುವ ಹೊಸ ತಳಿ:
ಸಾಮಾನ್ಯವಾಗಿ ಗೇರಿನ ಬೀಜಗಳು 6ರಿಂದ 8 ಗ್ರಾಂ ತೂಕವನ್ನು ಹೊಂದಿರುತ್ತವೆ. ಆದರೆ ಸಂಶೋಧನಾಲಯ ಅಭಿವೃದ್ಧಿಪಡಿಸಿರುವ ಬೀಜಗಳು 12 ರಿಂದ 13 ಗ್ರಾಂ ತೂಕ ಹೊಂದಿವೆ. 2000ನೇ ಇಸವಿಯಿಂದ ಸಂಸ್ಥೆ ಸಂಶೋಧನೆ ಆರಂಭಿಸಿತ್ತು. ಇದೀಗ 2021ರಲ್ಲಿ ತಳಿಯ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಬೀಜದ ಗಾತ್ರ ಹೆಚ್ಚಿದಷ್ಟು ರೈತರಿಗೆ ಲಾಭ ಎನ್ನುವ ಕಾರಣಕ್ಕಾಗಿ ಈ ರೀತಿಯ ಸಸಿಗಳ ಅಭಿವೃದ್ಧಿಗೆ ಡಿಸಿಆರ್ ಮುಂದಾಗಿತ್ತು.
ಅಧಿಕ ಲಾಭ ಕೊಡಲಿದೆ:
ಈ ತಳಿಯ ಸಸಿಯಲ್ಲಿ ಬೆಳೆಯಲಾಗುವ ಶೇ.90 ಕ್ಕೂ ಹೆಚ್ಚಿನ ಬೀಜಗಳು ಒಂದೇ ಗಾತ್ರವಿದ್ದು, ಎಲ್ಲಾ ಬೀಜಗಳೂ ಸರಿ ಸುಮಾರು 12 ರಿಂದ 13 ಗ್ರಾಂ ನಷ್ಟು ತೂಗುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಿರುವ ರಫ್ತು ಗುಣಮಟ್ಟಕ್ಕಿಂತ W-180 ಗಿಂತಲೂ ಹೆಚ್ಚಿನ ಗ್ರೇಡ್ W-130 ಗುಣಮಟ್ಟ ಈ ತಳಿಯ ತಿರುಳಿನದ್ದಾಗಿದೆ. ಹಣ್ಣಿನ ತೂಕ 100 ರಿಂದ 150 ಗ್ರಾಂ ಗಿಂತ ಹೆಚ್ಚಿದ್ದು, ಕೆಂಪು ಬಣ್ಣ ಹೊಂದಿದೆ. 10 ವರ್ಷದ ಒಂದು ವಯಸ್ಕ ಸಸಿಯಿಂದ 10 ಕಿಲೋದಷ್ಟು ಬೀಜಗಳನ್ನು ಪಡೆಯಬಹುದಾಗಿದ್ದು, 1 ಹೆಕ್ಟೇರ್ ಭೂಮಿಯಲ್ಲಿ 200 ಗಿಡಗಳನ್ನು ನೆಡಬಹುದಾಗಿದೆ. ಪ್ರತಿ ಗಿಡದಿಂದ 10 ಕಿಲೋದಂತೆ 200 ಗಿಡಗಳಿಂದ 2 ಟನ್ ಬೀಜಗಳನ್ನು ಪಡೆಯಬಹುದು. ನೀರು ಹಾಯಿಸದೆಯೂ ಗಿಡಗಳನ್ನು ಬೆಳೆಯಬಹುದಾಗಿದೆ.
ಬೀಜ ಹೆಕ್ಕುವಾಗ 1 ಟನ್ ಇಳುವರಿಗೆ 16 ಸಾವಿರ ರೂ. ಕೂಲಿ ಖರ್ಚನ್ನು ಉಳಿಸುತ್ತದೆ. ಈಗಿನ ಮಾರುಕಟ್ಟೆ ದರದಲ್ಲಿ ದೊಡ್ಡ ಗಾತ್ರದ ಬೀಜಕ್ಕೆ 1 ಟನ್ಗೆ 10 ಸಾವಿರ ರೂಪಾಯಿ ಜಾಸ್ತಿ ಸಿಗುತ್ತದೆ. ಒಟ್ಟು 26 ಸಾವಿರ ರೂ.ಗಳಷ್ಟು ಲಾಭ 1 ಟನ್ಗೆ ಸಿಗುತ್ತದೆ. ಭಾಸ್ಕರ, ವಿಆರ್‌ಐ-3, ಉಳ್ಳಾಲ -3 ಇತ್ಯಾದಿಗಳು ಬಹುತೇಕ ಸಣ್ಣ ಹಾಗೂ ಮಧ್ಯಮ ಗಾತ್ರದ ಗೋರಿನ ತಳಿಗಳಾಗಿವೆ. ಹಾಗಾಗಿ ಈ ದೊಡ್ಡ ಗಾತ್ರದ ಬೀಜದ ತಳಿ ಒಣಭೂಮಿ ಕೃಷಿಯಲ್ಲಿ ಹೊಸ ಭರವಸೆ ಹುಟ್ಟಿಸಬಲ್ಲುದು.