ಬೆಳ್ತಂಗಡಿ (ದಕ್ಷಿಣಕನ್ನಡ): ತಾಲೂಕು ಕಾಂಗ್ರೆಸ್ ವತಿಯಿಂದ ತೈಲ ಬೆಲೆ ಏರಿಕೆ ಖಂಡಿಸಿ ಬೆಳ್ತಂಗಡಿ ಬಸ್ ನಿಲ್ದಾಣದಿಂದ ವಾಹನವೊಂದಕ್ಕೆ ಹಗ್ಗ ಕಟ್ಟಿ ಮಿನಿ ವಿಧಾನಸೌಧದವರೆಗೆ ಎಳೆದುಕೊಂಡು ಹೋಗುವ ಮೂಲಕ ಆಕ್ರೋಶ ವ್ಯಕ್ತಪಡಿಸಲಾಯಿತು.
ಮಿನಿ ವಿಧಾನಸೌಧದ ಎದುರು ಪ್ರತಿಭಟನಾಕಾರರನ್ನ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ, ಕೇಂದ್ರ ಸರ್ಕಾರ ಕೊರೊನಾದಿಂದ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನ ಇನ್ನಷ್ಟು ಆತಂಕಕ್ಕೆ ತಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಮೂಲಕ ಅಚ್ಚೇ ದಿನ್ ಬರುತ್ತದೆ ಎಂದು ಜನರಿಗೆ ಆಸೆ ಹುಟ್ಟಿಸುತಿದ್ದಾರೆ ಹೊರತು ಇಷ್ಟರವರೆಗೆ ಯಾವುದೇ ಅಚ್ಚೇ ದಿನ್ ಬಂದಿಲ್ಲ.
ಲಕ್ಷಾಂತರ ಜನ ನಿರುದ್ಯೋಗದಿಂದ ಸಾಯುತ್ತಿದ್ದಾರೆ. ಭಾಷಣಕ್ಕೆ ಮಾತ್ರ ಯೋಜನೆಗಳು ಸೀಮಿತವಾಗಿದ್ದು, ಯಾವುದೇ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಅದಲ್ಲದೆ ಕೊರೊನಾ ತಡೆಗಟ್ಟುವಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಇದರಿಂದ ದೇಶದ ಜನರು ಭಯಭೀತರಾಗಿದ್ದಾರೆ ಎಂದು ಸರ್ಕಾರಗಳ ವಿರುದ್ಧ ಕಿಡಿಕಾರಿದರು.
ಜಿ.ಪಂ ಸದಸ್ಯ ಸಾಹುಲ್ ಹಮೀದ್ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಪೆಟ್ರೋಲ್ ಬೆಲೆ 20 ರೂ. ಮಾಡುತ್ತೇವೆ ಎಂದು ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದರು. ಅದನ್ನು ನಾವು ನಂಬಿದೆವು. ಭಾರತವನ್ನ ವಿಶ್ವ ಗುರು ಮಾಡುತ್ತೇವೆ ಎಂದ ನರೇಂದ್ರ ಮೋದಿಯ ಮಾತನ್ನ ನಂಬಿ ಮತ ಹಾಕಿ ಗೆಲ್ಲಿಸಿದೆವು. ಆದರೆ ಇದೀಗ ಅವರನ್ನ ನಂಬಿದ ಜನ ರಸ್ತೆಗೆ ಬರುವಂತಾಗಿದೆ ಎಂದು ಹಮೀದ್ ಅಸಮಾಧಾನ ವ್ಯಕ್ತಪಡಿಸಿದರು.