ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮೀಷನರ್ ಆಗಿ ಇತ್ತೀಚೆಗಷ್ಟೆ ಅಧಿಕಾರ ಸ್ವೀಕರಿಸಿದ ಕುಲದೀಪ್ ಕುಮಾರ್ ಜೈನ್ ಅವರ ನಿರ್ದೇಶನದಂತೆ ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ವಿವಿಧೆಡೆ ಅಕ್ರಮ ಮರಳುಗಾರಿಕೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ವಹಿಸಿರುವ ಪೊಲೀಸ್ ಇಲಾಖೆ ನಗರದ ವಿವಿಧೆಡೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರಳು ಲಾರಿಯ ಮೇಲೆ ದಾಳಿ ನಡೆಸಿ ಸುಮಾರು 30ರಿಂದ 40 ಟನ್ನಷ್ಟು ಮರಳನ್ನು ವಶಪಡಿಸಿಕೊಳ್ಳಲಾಗಿದೆ.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಎಂಆರ್ಪಿಎಲ್ ಮೇಲ್ಸೇತುವೆ ಬಳಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳ ಮೇಲೆ ದಾಳಿ ನಡೆಸಿರುವ ಪೊಲೀಸರು 10 ಟನ್ ಮರಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿನ ತಣ್ಣೀರುಬಾವಿ ರಸ್ತೆಯಲ್ಲಿ ಸುಮಾರು 12 ರಿಂದ 15 ಟನ್ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಪಣಂಬೂರು ಠಾಣೆಯ ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅಲ್ಲದೇ ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಆಡಂ ಕುದ್ರು ಎಂಬಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಎರಡು ಯುನಿಟ್ ನಷ್ಟು ಮರಳನ್ನು ಜಪ್ತಿ ಮಾಡಿದ್ದಾರೆ. ಇಲ್ಲಿನ ಖಾಲಿ ಟಿಪ್ಪರ್ ಲಾರಿಯನ್ನು ಕಂಕನಾಡಿ ಠಾಣೆಯ ಠಾಣಾಧಿಕಾರಿ ವಶಕ್ಕೆ ಪಡೆದಿದ್ದಾರೆ. ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುನ್ನೂರು ಗ್ರಾಮದ ಸೋಮನಾಥ ಉಳಿಯ ದೇವಸ್ಥಾನದ ಬಳಿ ಅಕ್ರಮ ಮರಳು ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಕ್ರಮ ದಾಸ್ತಾನು ಮಾಡಿರುವ ಸುಮಾರು ಹತ್ತು ಲೋಡ್ ಮರಳು ಹಾಗೂ ಒಂದು ಹಿಟಾಚಿ ಸ್ವಾಧೀನಪಡಿಸಿಕೊಂಡಿದ್ದಾರೆ. ವಶ ಪಡಿಕೊಂಡ ಮರಳುಗಳನ್ನು ಮುಂದಿನ ಕ್ರಮಕ್ಕಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಿಗೆ ಹಸ್ತಾಂತರಿಸಲಾಗಿದೆ.
ಮಂಡ್ಯದಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ : ಕಳೆದ ವಾರ, ಮಂಡ್ಯ ಜಿಲ್ಲೆಯ ಶಿಂಷಾ ನದಿಯಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಬಗ್ಗೆ ತಿಳಿದ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಮರಳನ್ನು ವಶಕ್ಕೆ ಪಡೆದಿದ್ದರು. ಮಂಡ್ಯ ಉಪ ವಿಭಾಗಾಧಿಕಾರಿ ಹೆಚ್.ಎಸ್ ಕೀರ್ತನಾ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ದಂಧೆಕೋರರು ಪರಾರಿಯಾಗಿದ್ದರು. ಕಳೆದ ವರ್ಷ ಸುರಿದ ಮಳೆಯಿಂದಾಗಿ ಶಿಂಷಾ ನದಿ ಉಕ್ಕಿ ಹರಿದಿತ್ತು. ಒಂದು ವರ್ಷಕ್ಕೂ ಹೆಚ್ಚು ಕಾಲ ಉಕ್ಕಿ ಹರಿದ ಪರಿಣಾಮ ಅಪಾರ ಪ್ರಮಾಣದ ಮರಳು ನದಿಯಲ್ಲಿ ಶೇಖರಣೆಗೊಂಡಿತ್ತು.
ಇದನ್ನೂ ಓದಿ : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ