ಮಂಗಳೂರು: ನಗರದಲ್ಲಿ ಡಿ.19ರಂದು ನಡೆದ ಸಿಎಎ ಕಾಯ್ದೆ ವಿರೋಧಿಸಿ ನಡೆದ ಗಲಭೆಯ ವಿಚಾರವಾಗಿ ಮಾಜಿ ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ ಸಿಡಿ ವಿಚಾರವಾಗಿ ನಗರ ಪೊಲೀಸ್ ಕಮಿಷನರ್ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ ಈ ಕುರಿತು ಮಾತನಾಡಿದ್ದು, ಡಿಸೆಂಬರ್ 19 ರಂದು 144 ಸೆಕ್ಷನ್ ಜಾರಿಯಲ್ಲಿದ್ದರೂ, ಕೆಲ ಕಿಡಿಗೇಡಿಗಳ ಗುಂಪು ಅಕ್ರಮ ಕೂಟ ರಚಿಸಿ ವ್ಯಾಪಕ ಹಿಂಸಾಚಾರಕ್ಕೆ ತೊಡಗಿತ್ತು. ಈ ಸಂದರ್ಭ ಕರ್ತವ್ಯನಿರತ ಪೊಲೀಸರು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಶಾಂತಿ ಹಾಗೂ ಸುವ್ಯವಸ್ಥೆಗೆ ಭಂಗ ಬಾರದಂತೆ ಕರ್ತವ್ಯ ನಿರ್ವಹಿಸಿದ್ದರು ಎಂದು ತಿಳಿಸಿದ್ರು.
ಘಟನೆಯ ಕುರಿತು ಆರೋಪಿಗಳ ಪತ್ತೆಗಾಗಿ ವಿಡಿಯೋಗಳನ್ನು ಮಂಗಳೂರು ಪೊಲೀಸ್ ಅಧಿಕೃತ ಫೇಸ್ಬುಕ್ ಪೇಜ್‌ನಲ್ಲಿ ಹಾಕಲಾಗಿತ್ತು. ಈ ಕುರಿತು ಸಾರ್ವಜನಿಕರಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ವಿಡಿಯೋ ಲಭ್ಯ ಆಗಿದೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಘಟನೆಯ ಕೆಲ ಆಯ್ದ ದೃಶ್ಯಗಳನ್ನು ಸೀಕ್ವೆನ್ಸ್ ಮತ್ತು ಕಾಂಟೆಕ್ಸ್ಟ್ ಬದಲಿಸಿ ಮಾಧ್ಯಮದ ಮೂಲಕ ಬಿಡುಗಡೆ ಮಾಡಲಾಗಿದೆ. ಈ ತುಣುಕುಗಳ ಸಮಗ್ರ ದೃಶ್ಯಗಳನ್ನು ನೋಡಿದಾಗ ಸಂಪೂರ್ಣ ನೈಜ ಚಿತ್ರಣ ನೋಡಲು ಸಾಧ್ಯ. ಹಾಗಾಗಿ ತುಣುಕುಗಳ ಸೀಕ್ವೆನ್ಸ್ ಮತ್ತು ಕಾಂಟೆಕ್ಸ್ಟ್ ಪರಿಶೀಲಿಸುವುದು ಅಗತ್ಯ ಎಂದು ಹೇಳಿದರು.ಈಗಾಗಲೇ ಸಿಐಡಿ ಮತ್ತು ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಹಾಗಾಗಿ ಮಂಗಳೂರು ಪೊಲೀಸ್ ತಮ್ಮ ಬಳಿ ಇದ್ದ ಸಾಕ್ಷ್ಯಗಳನ್ನು ಶಾಸನಬದ್ಧವಾದ ತನಿಖಾ ಸಂಸ್ಥೆಗೆ ಒದಗಿಸಲಿದೆ. ಸಂಪೂರ್ಣ ತನಿಖೆಯ ಬಳಿಕ ಪೂರ್ಣ ಸತ್ಯ ಹೊರ ಬರಲಿದೆ ಎಂದು ಹೇಳಿದರು.