ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಪ್ರಸಿದ್ಧ ನಾಗಾರಾಧನೆಯ ತಾಣ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಳೆದ 25 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವಿಜಯಾ ಬ್ಯಾಂಕ್ ಪ್ರಸ್ತುತ ಬ್ಯಾಂಕ್ ಆಫ್ ಬರೋಡಾ ಆದ ಬಳಿಕ ಕ್ಷೇತ್ರದಲ್ಲಿ ಇದುವರೆಗೂ ಎಟಿಎಂ ಕೇಂದ್ರ ತೆರೆದಿಲ್ಲ.
ಇದರಿಂದಾಗಿ ಬ್ಯಾಂಕ್‍ನ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಅಲ್ಲದೇ ನಿತ್ಯ ಕುಕ್ಕೆಗೆ ಬರುವ ಸಹಸ್ರಾರು ಭಕ್ತರಿಗೂ ಕೂಡಾ ಇದರಿಂದ ಸಮಸ್ಯೆಯಾಗಿದೆ. ಕುಕ್ಕೆಯಲ್ಲಿ ಶಾಖೆ ಹೊಂದಿರದ ಬ್ಯಾಂಕ್‍ಗಳೇ ಎಟಿಎಂ ಕೇಂದ್ರವನ್ನು ಹೊಂದಿದ್ದು, 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬ್ಯಾಂಕ್ ಎಟಿಎಂ ಕೇಂದ್ರ ಹೊಂದಿಲ್ಲ ಎಂದು ಸುಬ್ರಹ್ಮಣ್ಯದ ಯುವ ಉದ್ಯಮಿ ನಿತಿನ್ ನೂಚಿಲ ಪ್ರಧಾನ ಮಂತ್ರಿಗಳ ಪಿಜಿ ಪೋರ್ಟಲ್ ಮೂಲಕ ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದರು. ದೂರಿಗೆ ತಕ್ಷಣ ಸ್ಪಂದಿಸಿದ ಪ್ರಧಾನ ಮಂತ್ರಿಗಳ ಕಾರ್ಯಾಲಯವು ಈ ಬಗ್ಗೆ ಸೂಕ್ತ ವ್ಯವಸ್ಥೆ ಮಾಡುವಂತೆ ಬ್ಯಾಂಕ್ ಆಫ್ ಬರೋಡಾದ ಗುಜರಾತ್‍ನ ಪ್ರಧಾನ ಕಚೇರಿ ಜನರಲ್ ಮ್ಯಾನೇಜರ್ಗೆ ಆದೇಶಿಸಿದೆ.
ಪ್ರಧಾನಿ ಕಾರ್ಯಾಲಯದ ಆದೇಶದಂತೆ ಬ್ಯಾಂಕ್ ಅಧಿಕಾರಿಗಳು ಮಂಗಳೂರಿನ ರೀಜನಲ್ ಕಚೇರಿಗೆ ಆದೇಶಿಸಿದ್ದಾರೆ. ಮಂಗಳೂರು ವಿಭಾಗದ ಜನರಲ್ ಮ್ಯಾನೇಜರ್ ನಿತಿನ್ ಅವರಿಗೆ ಈ -ಮೇಲ್ ಸಂದೇಶದ ಮೂಲಕ ತಕ್ಷಣವೇ ಕುಕ್ಕೆಯಲ್ಲಿ ಎಟಿಎಂ ಕೇಂದ್ರ ಸ್ಥಾಪನೆಯ ಬಗ್ಗೆ ಭರವಸೆ ನೀಡಿದ್ದರೆ. ಬ್ಯಾಂಕ್‍ನ ಕಚೇರಿ ಸದ್ಯದಲ್ಲೆ ನೂತನ ಕಟ್ಟಡದಲ್ಲಿ ಕಾರ್ಯಾಚರಣೆ ನಡೆಸಲಿದೆ. ಈ ಸಂದರ್ಭದಲ್ಲಿ ನೂತನ ಎಟಿಎಂ ಕೂಡಾ ಸ್ಥಾಪಿತವಾಗಲಿದೆ ಎಂಬ ಭರವಸೆಯನ್ನು ನಿತೀನ್ ಅವರಿಗೆ ಈ -ಮೇಲ್ ಮೂಲಕ ಬ್ಯಾಂಕ್ ಅಧಿಕಾರಿಗಳು ನೀಡಿದ್ದಾರೆ. ಈ ಮೂಲಕ ಕುಕ್ಕೆಗೆ ನೂತನ ಎಟಿಎಂ ಆಗಮನಕ್ಕೆ ತಳಹದಿ ಒದಗಿ ಬಂದಿದೆ.
ಗ್ರಾಮೀಣ ಭಾಗದ ಯುವಕ ಹಾಗೂ ಯುವ ಉದ್ಯಮಿ ನಿತಿನ್ ನೂಚಿಲ ಅವರು ಈ ಹಿಂದೆ ಕುಕ್ಕೆಯಲ್ಲಿ ಇದ್ದ ಏಕೈಕ ಬಿಎಸ್‍ಎನ್‍ಎಲ್ ಟವರ್ನಿಂದ ಪರಿಪೂರ್ಣ ರೇಂಜ್ ದೊರಕುತ್ತಿಲ್ಲ ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ 2016ರ ಜುಲೈನಲ್ಲಿ ದೂರು ನೀಡಿದ್ದರು. ಈ ದೂರಿಗೆ ಸ್ಪಂದನೆ ದೊರಕಿ ಕುಕ್ಕೆಯಲ್ಲಿ ಮತ್ತೊಂದು ಬಿಎಸ್‍ಎನ್‍ಎಲ್ ಟವರ್ ನಿರ್ಮಾಣವಾಗಿತ್ತು. ಇದೀಗ ಎಟಿಎಂಗೆ ಬೇಡಿಕೆ ಸಲ್ಲಿಸಿ ಯಶಸ್ವಿಯಾಗಿದ್ದಾರೆ.
ವಾರದ ರಜಾದಿನ ಮತ್ತು ಸರಕಾರಿ ರಜಾ ದಿನಗಳಲ್ಲಿ ಕ್ಷೇತ್ರಕ್ಕೆ ಅಸಂಖ್ಯಾತ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದರಿಂದ ಕುಕ್ಕೆಯಲ್ಲಿನ ಹೆಚ್ಚಿನ ಎಟಿಎಂಗಳು ಈ ಸಮಯದಲ್ಲಿ ಕೆಲಸ ಮಾಡದೇ ಬಂದ್ ಆಗಿರುತ್ತದೆ ಎಂಬ ದೂರುಗಳು ಕಳೆದ ಕೆಲವು ಸಮಯಗಳಿಂದ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡಾದ ನೂತನ ಎಟಿಎಂ ಸ್ಥಾಪನೆಗೆ ಒತ್ತು ದೊರಕಿರುವುದು ಹೆಚ್ಚು ಅನುಕೂಲಕರವಾಗಿದೆ.