ಪುತ್ತೂರು: ನಗರದಲ್ಲಿ ಮತ್ತೆ ಜನಸಂಚಾರ ಹೆಚ್ಚಳಗೊಂಡಿದ್ದು, ಜನತೆಯ ಈ ವರ್ತನೆಗೆ ಪೊಲೀಸರೇ ಆತಂಕಕ್ಕೆ ಒಳಗಾಗಿದ್ದಾರೆ. ನಗರದ ಧರ್ಮಸ್ಥಳ ಬಿಲ್ಡಿಂಗ್ ನಲ್ಲಿರುವ ರಾಷ್ಟಿಕೃತ ಬ್ಯಾಂಕ್ ಒಂದರ ಎದುರು ಹಣ ಪಡೆಯಲು ನೆರೆದಿದ್ದ ಜನತೆಯ ಗುಂಪು ಲಾಕ್‌ಡೌನ್ ಉದ್ದೇಶವನ್ನೇ ಕೆಣಕುವಂತಿತ್ತು.
ಜನಧನ್ ಮತ್ತು ಕಿಸಾನ್ ಸಮ್ಮಾನ್ ಹಣ ಪಡೆಯಲು ಬ್ಯಾಂಕಿನ ಮುಂದೆ ಸರತಿ ಸಾಲಿನಲ್ಲಿ ಜನತೆ ನಿಂತಿದ್ದರೂ ಇಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಯಲಿಲ್ಲ. ನೂರಾರು ಸಂಖ್ಯೆ ಮಂದಿ ಇಲ್ಲಿ ನೆರೆದಿದ್ದು, ಬ್ಯಾಂಕ್ ಅಧಿಕಾರಿ ವರ್ಗವೂ ಈ ಬಗ್ಗೆ ಯಾವುದೇ ತಲೆಬಿಸಿ' ಮಾಡಿಕೊಂಡ ಹಾಗೆ ಕಂಡುಬರಲಿಲ್ಲ.
ಹೆಚ್ಚು ಜನ ಬಂದಾಗ ಪ್ರತ್ಯೇಕ ವಿಭಾಗ ಮಾಡುವ ಕೆಲಸವೂ ಬ್ಯಾಂಕ್ ಅಧಿಕಾರಿಗಳಿಂದ ನಡೆಯಲಿಲ್ಲ. ಬ್ಯಾಂಕಿನ ಮುಂದೆ ಕನಿಷ್ಠ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮಾರ್ಕ್ ಅಳವಡಿಕೆಯೂ ಮಾಡಿರಲಿಲ್ಲ. ಈ ಮಾಹಿತಿ ಪಡೆದ ಸಂಚಾರಿ ಠಾಣಾ ಸಬ್ ಇನ್ಸ್ಪೆಕ್ಟರ್ ಚೆಲುವಯ್ಯ ಹಾಗೂ ತಂಡ ಬ್ಯಾಂಕಿನಲ್ಲಿ ಗುಂಪುಗೂಡಿ ನಿಂತ ಜನತೆಯನ್ನು ಚದುರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕ್ರಮಕೈಗೊಂಡರು.