ಕಡಬ(ದಕ್ಷಿಣ ಕನ್ನಡ): ಸರ್ಕಾರದ ಹಣವನ್ನು ಯಾವೆಲ್ಲಾ ರೀತಿಯಲ್ಲಿ ಪೋಲು ಮಾಡುತ್ತಾರೆ ಎಂಬುದಕ್ಕೆ ಇದೊಂದು ಸಣ್ಣ ನಿದರ್ಶನ. ಸರ್ಕಾರದ ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಪ್ರಚಾರ ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಆದರೆ ಈ ವಾಹನವನ್ನು ಪ್ರಚಾರ ಮಾಡಬೇಕಾದ ಚಾಲಕ ಮುಖ್ಯ ಪೇಟೆ ಬಿಟ್ಟು ಕೆಲವು ಗಲ್ಲಿ, ಮರದ ನೆರಳಿನಲ್ಲಿ ತಂದು ನಿಲ್ಲಿಸಿ ನಿದ್ದೆಯಲ್ಲಿ ಮಗ್ನರಾಗಿರುವ ಆರೋಪ ಕೇಳಿಬಂದಿದೆ.
ಗುತ್ತಿಗೆ ನೀಡುವ ಸಮಯದಲ್ಲಿ ಕೈಗೊಳ್ಳುವ ನಿಯಮದಂತೆ 40 ಕಿ.ಮೀ ಅನ್ನು ಸಾಯಂಕಾಲ ಸಮಯದಲ್ಲಿ ಒಮ್ಮೆಲೆ ಸಂಚರಿಸಿ ಕಾಟಾಚಾರಕ್ಕೆ ತಾವು ತಮ್ಮ ಕರ್ತವ್ಯ ಪೂರ್ತಿಗೊಳಿಸಿದ್ದೇವೆ ಎಂದು ಮೇಲಾಧಿಕಾರಿಗಳಿಗೆ ವರದಿ ನೀಡುತ್ತಾರೆ ಎಂಬ ಆರೋಪವೂ ಇದೆ. ಕಡಬ ತಾಲೂಕಿಗೆ ಬೆಳಗ್ಗೆ ಆಗಮಿಸಿದ ಈ ಶ್ರಮಿಕರ ಕಲ್ಯಾಣ ಸಹಾಯವಾಣಿ 155214 ನಂಬರ್ ಪ್ರಚಾರದ ವಾಹನವನ್ನು ಇದರ ಚಾಲಕ ಪೇಟೆಯಲ್ಲಿ ಪ್ರಚಾರ ಮಾಡುವ ಬದಲು ಇಲ್ಲಿನ ಅಂಬೇಡ್ಕರ್ ಭವನಕ್ಕೆ ತೆರಳುವ ಒಳ ರಸ್ತೆಯಲ್ಲಿನ ಒಂದು ಮರದ ಕೆಳಗೆ ತಂದು ಹಾಕಿ ನಿದ್ದೆಯಲ್ಲಿ ನಿರತನಾಗಿದ್ದು ಕಂಡುಬಂದಿದೆ. ಈ ಬಗ್ಗೆ ಮಂಗಳೂರು ಕಾರ್ಮಿಕ ಅಧಿಕಾರಿಗಳಿಗೆ ಮಾಹಿತಿ ತಲುಪಿದೆ. ಬಳಿಕ ಚಾಲಕನಿಗೆ ಮೇಲಾಧಿಕಾರಿಗಳ ಕರೆ ಬಂದಿದ್ದು, ತಕ್ಷಣವೇ ಪ್ರಚಾರ ವಾಹನದೊಂದಿಗೆ ಸ್ಥಳದಿಂದ ಚಾಲಕ ಕಾಲ್ಕಿತ್ತಿದ್ದಾನೆ.
ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಮಿಕ ಇಲಾಖೆ ಕಮಿಷನರ್ ಈಟಿವಿ ಭಾರತದ ಜೊತೆಗೆ ಮಾತನಾಡಿದ್ದು, ''ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಈಗಾಗಲೇ ಪುತ್ತೂರು ವಲಯದ ಅಧಿಕಾರಿಗಳಿಗೆ ಇಂತಹ ಪ್ರಚಾರ ವಾಹನಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಿದ್ದೇನೆ. ಮುಂದೆ ಈ ತರಹ ಆಗದಂತೆ ಎಚ್ಚರಿಕೆ ವಹಿಸಲಾಗುವುದು'' ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿರುವ ನೀತಿ ತಂಡ ಬೆಂಗಳೂರು ರಾಜ್ಯಾಧ್ಯಕ್ಷ ಜಯಂತ್ ಟಿ., ''ರಾಜಕೀಯ ನಾಯಕರುಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಡಬ ತಾಲೂಕಿನ ಅಂಬೇಡ್ಕರ್ ಭವನಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಸರ್ಕಾರದ ಶ್ರಮಿಕರ ಕಲ್ಯಾಣ ಸಹಾಯವಾಣಿಯನ್ನು ಸಾರ್ವಜನಿಕರಿಗೆ ಪ್ರಚಾರ ಮಾಡುವ ವಾಹನವೊಂದು ಬೆಳಗ್ಗೆಯಿಂದ ನಿಂತಿತ್ತು. ಅಧಿಕಾರಿಗಳು ಹೇಳಿದಂತೆ ದಿನದಲ್ಲಿ ಈ ವಾಹನ 40 ಕಿ.ಮೀ ಓಡಿದರೆ ಸಾಕು. ಜನರಿಗೆ ಮಾಹಿತಿ ತಲುಪಬೇಕು ಎನ್ನುವ ಉದ್ದೇಶ ಇದ್ದಂತಿಲ್ಲ'' ಎಂದಿದ್ದಾರೆ.
''ಪ್ರಚಾರ ಇಲಾಖೆಯವರು ಹಣ ಮಾಡುವ ಉದ್ಧೇಶದಿಂದ ಈ ರೀತಿ ಮಾಡಿದ್ದಾರೆ ಎನಿಸುತ್ತದೆ. ಯಾಕೆಂದರೆ ಈ ವಾಹನದ ಚಾಲಕ ಬೆಳಗ್ಗೆ ಬಂದು ಗಾಡಿಯನ್ನು ರಸ್ತೆ ಬದಿಯಲ್ಲಿ ಹಾಕಿ ಆರಾಮವಾಗಿ ನಿದ್ದೆ ಮಾಡಿ, ಸಾಯಂಕಾಲ ಮತ್ತೆ ಗಾಡಿ ತೆಗೆದುಕೊಂಡು ಹೋಗಿ ದಿನದ ಟಾರ್ಗೆಟ್ 40 ಕಿ. ಮೀ ಅನ್ನು ಮುಗಿಸುತ್ತಾನೆ. ಇದರ ಬದಲು ಸರ್ಕಾರದಿಂದ ಜನರಿಗೆ ಏನೆಲ್ಲಾ ಅನುಕೂಲಗಳು, ಸವಲತ್ತುಗಳಿವೆ ಎಂಬುದನ್ನು ತಿಳಿಸಲು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವ್ಯವಸ್ಥೆ ಇದೆ. ಗ್ರಾಮ ಪಂಚಾಯಿತಿ ಮೂಲಕ ಕರಪತ್ರಗಳನ್ನು ಹಂಚಿ ಮಾಡಬಹುದು. ಈ ರೀತಿ ಕೋಟಿ ಕೋಟಿ ಹಣವನ್ನು ವ್ಯರ್ಥ ಮಾಡುತ್ತಿರುವುದೇಕೆ'' ಎಂದು ಜಯಂತ್ ಟಿ. ಅವರು ಜನಪ್ರತಿನಿಧಿಗಳನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಬಿಸಿಯೂಟದ ಅಕ್ಕಿ ಕಲಬೆರಕೆ: ಅಕ್ಕಿ ಜೊತೆ ಸಿಕ್ತು ಪ್ಲಾಸ್ಟಿಕ್ ಮಣಿಗಳು!