ಬೆಳ್ತಂಗಡಿ: ರಾಜ್ಯ ಸರ್ಕಾರದ ಅನುದಾನದಿಂದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 82 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆಕ್ಸಿಜನ್ ಘಟಕ ಸ್ಥಾಪನೆಯ ಸ್ಥಳವನ್ನು ಸೋಮವಾರ ಶಾಸಕ ಹರೀಶ್ ಪೂಂಜ ಹಾಗೂ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರ ಸಹಕಾರದಿಂದ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ದ.ಕ.ಜಿಲ್ಲೆಯ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ 82 ಲಕ್ಷ ರೂ. ವೆಚ್ಚದ ಆಕ್ಸಿಜನ್ ಘಟಕ ನಿರ್ಮಿಸಲು ಅನುಮೋದನೆ ಕೊಟ್ಟಿದ್ದಾರೆ. ತಾಲೂಕಿನಲ್ಲಿ ಕೋವಿಡ್ ಸೋಂಕಿತರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವ ದೃಷ್ಟಿಯಿಂದ ಆಕ್ಸಿಜನ್ ಘಟಕ ನಿರ್ಮಿಸಲಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಜನರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಘಟಕ ಸ್ಥಾಪನೆ ಮಾಡಿ ಲೋಕಾರ್ಪಣೆ ಮಾಡಲಾಗುವುದು ಎಂದು ಹರೀಶ್ ಪೂಂಜ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇ.ಪಿ.ಶೆಟ್ಟಿ, ಸಹಾಯಕ ಎಂಜಿನಿಯರ್‌ಗಳಾದ ರಾಜೇಶ್ ರೈ, ಗೋಪಾಲಕೃಷ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು, ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾವತಿ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಕುಮಾರ್ ಶೆಟ್ಟಿ, ಆರೋಗ್ಯ ಇಲಾಖೆ ಸಂಯೋಜಕ ಅಜಯ್, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಎಂಜಿನಿಯರ್‌ಗಳು ಉಪಸ್ಥಿತರಿದ್ದರು.