ಮಂಗಳೂರು: ರಾಜ್ಯದ 25 ಲೋಕಸಭಾ ಸದಸ್ಯರಲ್ಲಿ ಓರ್ವನಿಗೂ ಕೇಂದ್ರದೊಡನೆ ನೇರವಾಗಿ ದೂರವಾಣಿ ಮೂಲಕ ಮಾತನಾಡುವ ಸಾಮರ್ಥ್ಯ, ಚೈತನ್ಯ ಶಕ್ತಿಯಿಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಲೇವಡಿ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಜಿಲ್ಲೆಯ ರಾಜ್ಯದ ಸಾಮಾನ್ಯ ವರ್ಗದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಒಳನಾಡು ಮೀನುಗಾರಿಕೆ ನಡೆಸುವವರ ಪರಿಸ್ಥಿತಿ ಬಹಳ ಸಂಕಷ್ಟದಲ್ಲಿದೆ. ಆರು ತಿಂಗಳಿಗೊಂದು ಊರೆಂದು ಸುತ್ತಾಡಿಕೊಂಡು ಬದುಕು ಸಾಗಿಸುತ್ತಿರುತ್ತಾರೆ. ಗುತ್ತಿಗೆದಾರರು ಹಿಂದೆ ದೊಡ್ಡ ದೊಡ್ಡ ದೊಡ್ಡ ಜಲಾಶಯಗಳನ್ನು ಗುತ್ತಿಗೆ ಪಡೆಯುತ್ತಿದ್ದರು. ಇಂತಹ ಅಲೆಮಾರಿ ಜನರಿಗೆ ಶಕ್ತಿ ತುಂಬುವ ಕೆಲಸ ಆಗಬೇಕೆಂದು ಸಿದ್ದರಾಮಯ್ಯ ಸಿಎಂ ಆಗಿರುವಾಗ ಜಲಾಶಯಗಳನ್ನು ಗುತ್ತಿಗೆ ಪಡೆಯುವುದನ್ನು ಬೇರ್ಪಡಿಸಿ ಹಿಂದುಳಿದ ಮೀನುಗಾರ ಕುಟುಂಬಗಳಿಗೆ ಅದನ್ನು ಲೀಸ್ ಮೂಲಕ ಕೊಡುವ ವ್ಯವಸ್ಥೆ ಮಾಡಿದ್ದರು. ಇಂದಿನ ಸರ್ಕಾರವೂ ಇಂತಹ ಒಳನಾಡು ಮೀನುಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದರು.
ಅದೇ ರೀತಿ ಬೀಡಿ, ಅಗರಬತ್ತಿ, ಆಟೊರಿಕ್ಷಾ, ಟೈಲರ್, ಫೋಟೋಗ್ರಾಫರ್ ವೃತ್ತಿಯಲ್ಲಿರುವವರ ಬದುಕು ಕೋವಿಡ್ ನಿಂದಾಗಿ ಕಷ್ಟದಾಯಕವಾಗಿದೆ. ಆದರೆ ಸರ್ಕಾರ ಇವರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ದುಡಿಯುವ ವರ್ಗ ಕೆಲಸವಿಲ್ಲದೇ ತತ್ತರಿಸಿ ಹೋಗಿದೆ. ಅವರ ಬದುಕಿಗೆ ಶಕ್ತಿ ತುಂಬುವ ಕಾರ್ಯ ಸರ್ಕಾರದ ಕಡೆಯಿಂದ ಆಗಬೇಕಿದೆ. ಇದು ನಮ್ಮ ಕಳಕಳಿಯ ವಿನಂತಿ ಎಂದು ಅವರು ಹೇಳಿದರು.
ಮೀನುಗಾರರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೆ ತಾರತಮ್ಯ ಮಾಡಿದೆ: ಮೀನುಗಾರರ ಮನಸನ್ನು ಮತೀಯವಾಗಿ ಭಾವನಾತ್ಮಕವಾಗಿ ಸೆಳೆದುಕೊಂಡು ಕರಾವಳಿಯಲ್ಲಿ ಮೀನುಗಾರರ ಮತವನ್ನು ಪಡೆಯುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ಆರ್ಥಿಕ ಸಂಕಷ್ಟಕ್ಕೊಳಗಾಗಿರುವ ಮೀನುಗಾರರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೆ ತಾರತಮ್ಯ ಮಾಡಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇನ್ನೂ ಕಾಲ ಮಿಂಚಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷವಾಗಿ ಸಾಲ ಮಾಡಿರುವ ಮೀನುಗಾರರ ಕಂತು ಕಟ್ಟುವುದನ್ನು ಆರು ತಿಂಗಳ ಮಟ್ಟಿಗೆ ಮುಂದೂಡುವ ಅಥವಾ ಬಡ್ಡಿ ಮನ್ನಾ ಮಾಡುವ ಕಾರ್ಯ ಮಾಡಲಿ ಎಂದು ಹೇಳಿದರು.
ಕರಾವಳಿಯಲ್ಲಿ ಆರ್ಥಿಕ ಶಕ್ತಿ ತುಂಬುವ ಕ್ಷೇತ್ರ ಮೀನುಗಾರಿಕೆ. ಈ ಉದ್ಯಮಕ್ಕೆ ಇಂದು ಬಂದಿರುವ ದುಸ್ಥಿತಿ ಯಾವತ್ತೂ ಬಂದಿಲ್ಲ. ಕೋವಿಡ್ ನ ಸಂಕಷ್ಟದಿಂದ ಮೀನುಗಾರಿಕೆಯ ಎಲ್ಲ ಕ್ಷೇತ್ರಗಳಿಗೆ ಹೊಡೆತ ಬಿದ್ದಿದೆ. ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಮೀನುಗಾರಿಕೆಗೆ ಅಗತ್ಯವಿರುವ ಡೀಸೆಲ್ ಸಬ್ಸಿಡಿ ಸಮಯಕ್ಕೆ ಮೀನುಗಾರರ ಖಾತೆಗೆ ಜಮಾ ಮಾಡುವ ಕಾರ್ಯ ಆಗುತ್ತಿತ್ತು. ಆದರೆ ಇದೀಗ ಡಿಸೆಂಬರ್ ನಿಂದ ಆರು ತಿಂಗಳಾದರೂ ಡೀಸೆಲ್ ಸಬ್ಸಿಡಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ. ಇದರಿಂದ ಸಂಕಷ್ಟದಲ್ಲಿರುವ ಮೀನುಗಾರರಿಗೆ ಕೊಡಲಿಯೇಟು ಬಿದ್ದಂತಾಗಿದೆ ಎಂದು ಹೇಳಿದರು.
ಓದಿ: ಲಸಿಕೆ ಕೊರತೆ ವಾಸ್ತವಾಂಶ ತಿಳಿಸಲು ಶ್ವೇತಪತ್ರ ಹೊರಡಿಸಿ: ಹೈಕೋರ್ಟ್ ನಿರ್ದೇಶನ