ಕಡಬ: ಕರ್ನಾಟಕ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಗ್ರಾಮದಲ್ಲಿ ಪ್ರಾರಂಭಿಸಲು ಉದ್ದೇಶಿಸಿರುವ ಸರ್ಕಾರಿ ಪಶು ವೈದ್ಯಕೀಯ ಮಹಾವಿದ್ಯಾಲಯದ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ಸರ್ಕಾರದ ತೀರ್ಮಾನದ ಪ್ರಕಾರ 2020-21 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಈ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮೊದಲ ಬ್ಯಾಚ್ ತರಗತಿಗಳು ಆರಂಭಗೊಳ್ಳಬೇಕಿತ್ತು.
ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಮೊದಲ ಹಂತದ ಕಟ್ಟಡದ ಕಾಮಗಾರಿಯು ಕೇವಲ ಶೇ. 75 ಮಾತ್ರ ಪೂರ್ಣಗೊಂಡಿದೆ. ಹಾಗಾಗಿ ಇನ್ನಿತರ ಕಾಮಗಾರಿಗಳು ಇನ್ನಷ್ಟೇ ಆರಂಭಗೊಳ್ಳಬೇಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಕೊಯಿಲದಲ್ಲಿ ಪಶು ವೈದ್ಯಕೀಯ ಕಾಲೇಜು ಆರಂಭಕ್ಕೆ ಬಜೆಟ್‍ನಲ್ಲಿ ಹಣ ಮೀಸಲಿಟ್ಟಿದ್ದರು. ಈ ಸಂಬಂಧ ಕೊಯಿಲ ಜಾನುವಾರು ಸಂವರ್ಧನಾ ಕೇಂದ್ರದ ಅಧೀನದಲ್ಲಿರುವ 247 ಎಕರೆ ಜಾಗವನ್ನು ಪಶು ವೈದ್ಯಕೀಯ ಕಾಲೇಜಿಗಾಗಿ ಮೀಸಲಿಡಲಾಗಿತ್ತು.
2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪಶು ವೈದ್ಯಕೀಯ ಮಹಾವಿದ್ಯಾಲಯ ಕಾಲೇಜಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಸುಮಾರು 300 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಾಲೇಜು ಕ್ಯಾಂಪಸ್ ನಿರ್ಮಾಣಗೊಳ್ಳಲಿದ್ದು, 2020-21ರ ವೇಳೆಗೆ ಮೊದಲ ಬ್ಯಾಚ್ ಆರಂಭಿಸುವ ಭರವಸೆಯನ್ನೂ ನೀಡಿದ್ದರು. ಆದರೆ ಕಾಲೇಜಿನ ಮೊದಲ ಹಂತದ ಕಾಮಗಾರಿಯೇ ಆಮೆಗತಿಯಿಂದ ಸಾಗುತ್ತಿದೆ. ಮೊದಲ ಹಂತದ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಗೃಹ ಮಂಡಳಿಗೆ ವಹಿಸಲಾಗಿದ್ದು, 110 ಕೋಟಿ ರೂಪಾಯಿ ವೆಚ್ಚದಲ್ಲಿ ಹುಡುಗರ, ಹುಡುಗಿಯರ ವಸತಿ ನಿಲಯ, ಅತಿಥಿ ಗೃಹ, ಕಾಲೇಜು ಕಟ್ಟಡ, ಆಸ್ಪತ್ರೆ ಕಟ್ಟಡಗಳು, ಕಚೇರಿ ಮತ್ತು ಸಿಬ್ಬಂದಿ ವಸತಿಗೃಹ ಕಟ್ಟಡಗಳ ನಿರ್ಮಾಣಗೊಳ್ಳಬೇಕಿತ್ತು. ಈ ಮಧ್ಯೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಕಾರ್ಮಿಕರು ಕೆಲಸ ಮಾಡಲು ಹಿಂದೇಟು ಹಾಕುತ್ತಿರುವುದು, ಸರ್ಕಾರದ ಅನುದಾನ ಬಿಡುಗಡೆಯಲ್ಲಿ ವ್ಯತ್ಯಯ ಮೊದಲಾದ ಕಾರಣಗಳು ಕಾಮಗಾರಿಯೂ ಆಮೆಗತಿಯಲ್ಲಿ ಸಾಗಲು ಕಾರಣವಾಗಿದೆ.
ಮೊದಲ ಹಂತದ ಕಾಮಗಾರಿಯ ಬಳಿಕ ಎರಡನೇ ಹಂತದ ಕಾಮಗಾರಿಗಳು ನಡೆಯಬೇಕಿದೆ. ಇದರಲ್ಲಿ ಒಳಚರಂಡಿ, ರಸ್ತೆ, ಸಿಬ್ಬಂದಿಗಳ ಕೊಠಡಿ, ಅಧಿಕಾರಿಗಳ ಬಂಗಲೆ, ಸಭಾಂಗಣ ಮೊದಲಾದ ಕಾಮಗಾರಿ ಎರಡನೇ ಹಂತದಲ್ಲಿ ಮಾಡಬೇಕಿದೆ. ಮೊದಲ ಹಂತದ ಕಾಮಗಾರಿಗೆ 110 ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದ್ದು, ಈ ಪೈಕಿ ಈವರೆಗೆ 65 ಕೋಟಿ ರೂ ಮಾತ್ರ ಬಿಡುಗಡೆಯಾಗಿದೆ ಎನ್ನಲಾಗಿದೆ. ಇನ್ನುಳಿದ ಹಣ ಬಿಡುಗಡೆಯಾಗುತ್ತಿದ್ದಂತೆ ಕಾಮಗಾರಿಯೂ ವೇಗ ಪಡೆಯುತ್ತದೆ. ಮೊದಲ ಹಂತದ ಕಾಮಾಗಾರಿ ಪೂರ್ತಿಯಾದ ಬಳಿಕ ಇಲಾಖಾ ಅನುಮತಿ ಪಡೆದು ಕಾಲೇಜು ಆರಂಭಿಸಬಹುದು ಎಂದು ಅಂದಾಜಿಸಲಾಗಿದೆ.
ಹಿಂದುಳಿದ ಪ್ರದೇಶದಲ್ಲಿ ಈ ಕಾಲೇಜು ಪ್ರಾರಂಭವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಸ್ಥಳೀಯರು ಇದಕ್ಕೆ ಹೆಚ್ಚಿನ ಸಹಕಾರವನ್ನೂ ನೀಡಿದ್ದರು. ಕೃಷಿಕರ ಮಕ್ಕಳಿಗೆ ಇದರಿಂದ ಪ್ರಯೋಜನವೂ ಆಗಲಿದೆ ಎನ್ನುವ ಆಶಾಭಾವನೆಯೂ ಇತ್ತು. ಆರಂಭದಲ್ಲಿ ಅತ್ಯಂತ ವೇಗವಾಗಿ ಸಾಗಿದ ಕಾಮಗಾರಿ ನಂತರದ ದಿನಗಳಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ ಸಾರ್ವಜನಿಕರಿಗೆ ಬೇಸರ ತಂದಿದ್ದು, ಸರ್ಕಾರ ಈ ಬಗ್ಗೆ ಗಮನಹರಿಸಿ ಕೂಡಲೇ ಕಾಲೇಜು ಪ್ರಾರಂಭಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.