ಮಂಗಳೂರು: ನಿನ್ನೆ ತಡರಾತ್ರಿ 10.30ರ ಸುಮಾರಿಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣೆ ಮಂಗಳೂರಿನಲ್ಲಿರುವ ನೇತ್ರಾವತಿ ನದಿಗೆ ಹಾರಿದ್ದವರಲ್ಲಿ ಮಹಿಳೆಯನ್ನು ರಕ್ಷಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ.
ಮೈಸೂರು ಮೂಲದ ಕವಿತಾ ಮಂದಣ್ಣ (55) ಮೃತ ಮಹಿಳೆ.
ಈಕೆ ಮಾರುತಿ ಇಕೋ ಕಾರಿನಲ್ಲಿ ತನ್ನ ನಾಯಿ ಹಾಗೂ ಇಬ್ಬರು ಮಕ್ಕಳೊಂದಿಗೆ ಪಾಣೆ ಮಂಗಳೂರಿನಲ್ಲಿರುವ ನೇತ್ರಾವತಿ ನದಿ ಸೇತುವೆಗೆ ಬಂದಿದ್ದಳು. ನಂತರ ಕಾರನ್ನು ಸೇತುವೆ ಬಳಿ ನಿಲ್ಲಿಸಿದ ಮಹಿಳೆ ಮಕ್ಕಳು ಹಾಗು ನಾಯಿಯೊಂದಿಗೆ ಸೇತುವೆಯ ಮಧ್ಯಭಾಗಕ್ಕೆ ತೆರಳಿ ನದಿಗೆ ಹಾರಿದ್ದಾಳೆ. ಘಟನೆ ಕಂಡ ಸ್ಥಳೀಯರು ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿ ನದಿಗೆ ಹಾರಿದವರನ್ನು ರಕ್ಷಿಸಲು ಪ್ರಯತ್ನಿಸಿದ್ದರು.
ಪೊಲೀಸರು ಕಾರಿನ ನೊಂದಣಿ ಸಂಖ್ಯೆಯ ಅಧಾರದ ಮೇಲೆ ತನಿಖೆ ನಡೆಸಿದಾಗ ಕಾರು ಮೈಸೂರು ಮೂಲದ ಕೌಶಿಕ್ ಮಂದಣ್ಣ (ಮೃತ ಮಹಿಳೆಯ ಮಗ) ಎಂಬವರಿಗೆ ಸೇರಿದ್ದಾಗಿದೆ ಎಂಬ ವಿಚಾರ ಗೊತ್ತಾಗಿದೆ. ಮೃತ ಮಹಿಳೆ ಮೈಸೂರು ಮೂಲದ ಕವಿತಾ ಮಂದಣ್ಣ, ತನ್ನ ಗಂಡನ ಮರಣದಿಂದ ಜಿಗುಪ್ಸೆಗೊಂಡು ತನ್ನ ಮಕ್ಕಳಾದ ಕೌಶಿಕ್ ಮಂದಣ್ಣ ಮತ್ತು ಕಲ್ಪಿತಾ ಮಂದಣ್ಣ ಎಂಬವರೊಂದಿಗೆ ಆತ್ಮಹತ್ಯೆಗೆ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ.
ಪ್ರಕರಣದಲ್ಲಿ ನಾಪತ್ತೆಯಾಗಿರುವ ಇನ್ನಿಬ್ಬರನ್ನು ಪತ್ತೆ ಮಾಡುವ ಸಲುವಾಗಿ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದವರಿಂದ ಹುಡುಕಾಟ ಮುಂದುವರೆದಿದೆ. ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.