ದಕ್ಷಿಣ ಕನ್ನಡ/ಬೆಳ್ತಂಗಡಿ: ನಂಬಿಕೆ ದ್ರೋಹದ ಆರೋಪದಡಿ ಸಿಲುಕಿ ಮಲೇಷ್ಯಾದಲ್ಲಿ ಜೈಲುಪಾಲಾಗಿರುವ ತಮ್ಮ ಮಗನನ್ನು ರಕ್ಷಿಸಿ ಭಾರತಕ್ಕೆ ಕರೆತರಬೇಕೆಂದು ತಾಯಿಯೋರ್ವರು ಉಪ್ಪಿನಂಗಡಿ ಪೊಲೀಸರ ಮೊರೆ ಹೋಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕಾರಿಂಜ ಕಾಂತಪ್ಪ ಪೂಜಾರಿ ಎಂಬುವರ ಪತ್ನಿ ಮೀನಾಕ್ಷಿ ಎಂಬುವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನ್ನ ಮಗ ಅಮಿತ್ ಎಂಬಾತನನ್ನು ಪ್ರದೀಪ್ ರೈ ಹಾಗೂ ಪ್ರಖ್ಯಾತ್ ರೈ ಎಂಬಿಬ್ಬರು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಲೇಷ್ಯಾಕ್ಕೆ ಕೊಂಡೊಯ್ಯುವ ಕರ್ತವ್ಯಕ್ಕೆ ನಿಯುಕ್ತಿಗೊಳಿಸಿದ್ದರು. 2013ನೇ ಇಸವಿ ಮಾರ್ಚ್ 2 ರಂದು ಆತ ಕೊಂಡೊಯ್ಯುವ ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲಿ ಮಾದಕ ದ್ರವ್ಯವನ್ನು ಇರಿಸಿದ್ದರು. ಇದರಿಂದಾಗಿ ಮಲೇಷ್ಯಾ ಪೊಲೀಸರಿಗೆ ವಶವಾಗುವಂತೆ ಮಾಡಿ, ಇದೀಗ ಮಗನ ಜೀವಕ್ಕೆ ಸಂಚಕಾರ ತಂದಿದ್ದಾರೆ ಎಂದು ಮೀನಾಕ್ಷಿ ದೂರಿದ್ದಾರೆ.
ಘಟನೆ ನಡೆದ ಬಳಿಕ ಆರೋಪಿಗಳು ನಿಮ್ಮ ಮಗನನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವ ಹೊಣೆ ನಮ್ಮದೆಂದು ತಿಳಿಸಿದ್ದರು. ಪ್ರಕರಣವನ್ನು ಯಾರಿಗೂ ತಿಳಿಸಬಾರದೆಂದು ತಾಕೀತು ಮಾಡಿದ ಕಾರಣ ಇಷ್ಟು ವರ್ಷ ಕಳೆದರೂ ದೂರು ನೀಡಲಾಗದೆ ಅಸಹಾಯಕರಾಗಿದ್ದೆವು. ಇತ್ತೀಚೆಗೆ ನಮ್ಮ ಮಗನಿಗೆ ಅಲ್ಲಿನ ನ್ಯಾಯಾಲಯದಲ್ಲಿ ಶಿಕ್ಷೆಯ ತೀರ್ಪು ಪ್ರಕಟವಾದ ವಿಚಾರ ತಿಳಿದುಬಂದಿದೆ. ಆರೋಪಿತರು ಪ್ರಕರಣವನ್ನು ಯಾರಿಗಾದರೂ ತಿಳಿಸಿದರೆ ಮಗ ಮತ್ತು ನಿಮ್ಮ ಜೀವ ಉಳಿಯದು ಎಂದು ಜೀವ ಬೆದರಿಕೆಯೊಡ್ಡಿರುವುದಲ್ಲದೆ, ನಂತರದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಮೀನಾಕ್ಷಿ ವಿವರಿಸಿದ್ದಾರೆ.
ದುಡಿದು ಬದುಕು ರೂಪಿಸಬೇಕೆಂದು ಹಂಬಲಿಸಿ ಕೆಲಸದ ಹುಡುಕಾಟದಲ್ಲಿದ್ದ ನನ್ನ ಮಗನ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಆತನಿಗೆ ಉತ್ತಮ ಕೆಲಸ ಕೊಡಿಸುತ್ತೇನೆಂದು ನಂಬಿಸಿ, ಅವನು ಕೊಂಡೊಯ್ಯುವ ವಸ್ತುಗಳಲ್ಲಿ ಆತನಿಗೆ ಅರಿವಿಲ್ಲದೆ ಮಾದಕ ವಸ್ತುಗಳನ್ನಿರಿಸಿ ಆತನಿಂದ ಸಾಗಿಸಲ್ಪಡುವಂತೆ ಮಾಡಿದ್ದಾರೆ. ಮಲೇಷ್ಯಾ ಕಾನೂನಿನ ಅನುಸಾರ ಅಪರಾಧಿಯನ್ನಾಗಿಸಿ ಇದೀಗ ಕಠಿಣ ಶಿಕ್ಷೆಗೆ ಗುರಿಯಾಗಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ನಿರ್ದೋಷಿಯಾದ ನಮ್ಮ ಮಗನ ನಿರಪರಾಧಿತ್ವವನ್ನು ಮಲೇಷ್ಯಾ ಸರ್ಕಾರಕ್ಕೆ ಮನವಿ ಮಾಡಿ ಆತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಮಿತ್ ತಾಯಿ ಮೀನಾಕ್ಷಿ ವಿನಂತಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಯುವಕನ ಬರ್ಬರ ಕೊಲೆ..ಯುವತಿ ಜೊತೆಗಿನ ಪ್ರೀತಿಯೇ ಹತ್ಯೆಗೆ ಕಾರಣವಾಯ್ತಾ?