ಬಂಟ್ವಾಳ: ರಾಜ್ಯ ಸಚಿವ ಸಂಪುಟ ಪುನರ್ರಚನೆ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಈ ಬಾರಿಯೂ ಸ್ಥಾನಮಾನ ದೊರಕುವುದು ಕಷ್ಟ ಎಂಬುದು ಬಹುತೇಕ ಖಚಿತವಾದಂತಿದೆ. ಪಕ್ಷಕ್ಕೆ ಆಗಮಿಸಿದವರ ಋಣ ತೀರಿಸಬೇಕಲ್ಲವೇ, ಬಿಜೆಪಿಗೆ ಬಹುಮತವಿದ್ದರೆ ಇಲ್ಲಿನವರಿಗೆ ಸಚಿವ ಸ್ಥಾನ ಕೊಡಬಹುದಿತ್ತು ಎಂಬ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುಳ್ಯ ಶಾಸಕ ಎಸ್.ಅಂಗಾರ, ಇದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಸಚಿವ ಸ್ಥಾನ ಕೊಡುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ನಿರೀಕ್ಷೆಗಳು ಎಲ್ಲರಿಗೂ ಇರುತ್ತದೆ. ಪಕ್ಷದ ತೀರ್ಮಾನಕ್ಕೆ ನಾವು ಬದ್ದರಾಗಿದ್ದು, ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ಆಗುತ್ತೆ, ಖಾತೆ ಬದಲಾವಣೆ ಆಗುವುದಿಲ್ಲ: ಶ್ರೀರಾಮುಲು
ದಕ್ಷಿಣ ಕನ್ನಡದ ಶಾಸಕರು ಕೇಳಿದಷ್ಟು ಅನುದಾನವನ್ನು ಸರ್ಕಾರ ಕೊಡುತ್ತಿದೆ. ಸಚಿವ ಸಂಪುಟದಲ್ಲಿ ಜಿಲ್ಲೆಯವರು ಇಲ್ಲ ಎಂಬುದು ಗೊತ್ತಿದೆ. ಆದರೆ 17 ಮಂದಿಯ ಋಣ ತೀರಿಸಬೇಕಾಗಿದೆ. ಅಂಗಾರ ಅವರಂಥ ವ್ಯಕ್ತಿ ಬಸನಗೌಡ ಪಾಟೀಲ ಆಗಲಿಲ್ಲ ಎಂಬುದೊಂದು ಸಮಾಧಾನ ಎಂದು ನೇರವಾಗಿ ಹೇಳುವ ಮೂಲಕ ಈ ಬಾರಿಯೂ ಸಚಿವ ಸ್ಥಾನ ದ.ಕ. ಜಿಲ್ಲೆಯಿಂದ ಆಯ್ಕೆಗೊಂಡ ಶಾಸಕರಿಗೆ ದೊರಕುವುದು ಡೌಟು ಎಂಬ ಸಂದೇಶವನ್ನು ಈ ಹಿಂದೆ ಸಚಿವ ಕೆ.ಎಸ್.ಈಶ್ವರಪ್ಪ ಮಾಹಿತಿ ರವಾನಿಸಿದ್ದರು.