ಮಂಗಳೂರು: ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ಹೊಸಂಗಡಿಯಲ್ಲಿರುವ ರಾಜಧಾನಿ ಜ್ಯುವೆಲ್ಲರ್ಸ್ಗೆ ಸೋಮವಾರ ಮಧ್ಯರಾತ್ರಿ 2ಗಂಟೆ ಸುಮಾರಿಗೆ ಕನ್ನ ಹಾಕಿರುವ ದರೋಡೆಕೋರರ ಇನ್ನೋವಾ ಕಾರು ಹಾಗೂ ದರೋಡೆ ಮಾಡಿರುವ 7.45 ಕೆಜಿ ಬೆಳ್ಳಿಯ ಆಭರಣ ಹಾಗೂ ನಗದನ್ನು ಉಳ್ಳಾಲ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಆರೋಪಿಗಳು ಇನ್ನೋವಾ ಕಾರನ್ನು ಸುರತ್ಕಲ್ ಮೂಲದ ಮುಸ್ತಾಫಾ ಎಂಬುವವರಲ್ಲಿ ಉಳ್ಳಾಲ ದರ್ಗಾ ಹಾಗೂ ಬಾಬಾ ಬುಡನ್ಗಿರಿಗೆ ತೆರಳಲೆಂದು ಬಾಡಿಗೆಗೆ ಪಡೆದಿದ್ದರು. ಆದರೆ ಕಾರು ಉಳ್ಳಾಲಕ್ಕೆ ತೆರಳದೇ ಕೇರಳ ಕಡೆಗೆ ಚಲಿಸುತ್ತಿರುವುದು ಜಿಪಿಎಸ್ ಮೂಲಕ ಭಾನುವಾರ ರಾತ್ರಿಯೇ ಕಾರು ಮಾಲಕ ಮುಸ್ತಫಾ ಅವರು ಖಚಿತಪಡಿಸಿದ್ದರು. ಕೂಡಲೇ ಅವರು ಉಳ್ಳಾಲ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರು.
ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸೋಮವಾರ ಮುಂಜಾನೆ ತಲಪಾಡಿ ದೇವಿಪುರದಲ್ಲಿ ಗಸ್ತಿನಲ್ಲಿದ್ದರು. ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರ್ಸ್ನಿಂದ ದರೋಡೆ ಮಾಡಿ ಬರುತ್ತಿದ್ದ ದರೋಡೆಕೋರರಿದ್ದ ಇನ್ನೋವಾ ಕಾರನ್ನು ಉಳ್ಳಾಲ ಪೊಲೀಸ್ ಇನ್ ಸ್ಪೆಕ್ಟರ್ ಪ್ರದೀಪ್ ಹಾಗೂ ಸಿಬ್ಬಂದಿ ತಡೆದಿದ್ದಾರೆ. ಈ ಸಂದರ್ಭ ಕಾರ್ನಲ್ಲಿದ್ದ ಏಳು ಮಂದಿ ಸಿಬ್ಬಂದಿ ಪೊಲೀಸರ ಮೇಲೆಯೇ ದಾಳಿ ನಡೆಸಲು ಯತ್ನಿಸಿದ್ದಾರೆ. ಪೊಲೀಸರು ಅವರ ಮೇಲೆ ಪ್ರತಿದಾಳಿ ನಡೆಸಿದಾಗ ದರೋಡೆಕೋರರು ಅಲ್ಲಿಂದ ಪಲಾಯನ ಮಾಡಿದ್ದಾರೆ.
ಇದನ್ನೂ ಓದಿ: ರಾಜ್ಯಕ್ಕಾಗಿರುವ ಅನ್ಯಾಯವನ್ನು ನೂತನ ಸಿಎಂ ಬೊಮ್ಮಾಯಿ ಸರಿಪಡಿಸಲಿ: ಡಿ.ಕೆ ಶಿವಕುಮಾರ್
ಪೊಲೀಸರು ಕಾರು ಸಹಿತ ದರೋಡೆ ಮಾಡಿದ 7.45 ಕೆಜಿ ಬೆಳ್ಳಿ ಆಭರಣ, 1.90 ಲಕ್ಷ ರೂ. ನಗದು, ಜ್ಯುವೆಲ್ಲರಿಯ ಡಿವಿಆರ್, ಖಾರದಪುಡಿ, ಕಬ್ಬಿಣದ ರಾಡ್, ಗ್ಯಾಸ್ ಕಟ್ಟರ್ ಅನ್ನು ವಶಪಡಿಸಿಕೊಂಡಿದ್ದಾರೆ.