ಮಂಗಳೂರು: ಭಜನಾ ಮಂದಿರ, ದೈವಸ್ಥಾನಗಳಲ್ಲಿ ಕಳವು ಪ್ರಕರಣದ ಆರೋಪಿಯನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಧಾರವಾಡ ತಾಲೂಕಿನ ಪ್ರಸ್ತುತ ಉಡುಪಿ ಜಿಲ್ಲೆಯ ಇಂದ್ರಾಳಿ ಸಮೀಪದ ಮಂಚಿ ಗ್ರಾಮ ನಿವಾಸಿ ರಾಜೇಶ್ ನಾಯ್ಕ್ ಅಲಿಯಾಸ್ ರಾಜು ಪಾಮಡಿ ಬಂಧಿತ ಆರೋಪಿ.
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ನಂದನಜಲು ರವಿ ಶೆಟ್ಟಿ ಅವರ ದೈವಸ್ಥಾನ, ಇಡ್ಯಾ ಗ್ರಾಮದ ಗುಡ್ಡೆಕೊಪ್ಪಳ ಜಾರು ಮನೆ ದೈವಸ್ಥಾನ ಹಾಗೂ ಶ್ರೀ ರಾಮಾಂಜನೇಯ ಭಜನಾ ಮಂದಿರ, ಚಿತ್ರಾಪುರ ಗ್ರಾಮದ ಸತೀಶ್ ಸುವರ್ಣರ ಮನೆಯ ದೈವಸ್ಥಾನಗಳಲ್ಲಿ ಕಳವು ಕೃತ್ಯ ನಡೆಸಿದ್ದಾನೆಂದು ಪೊಲೀಸರು ರಾಜೇಶ್ ನಾಯ್ಕ್ನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯಿಂದ 47 ಗ್ರಾಂ ತೂಕದ ಚಿನ್ನ ಹಾಗೂ 16 ಕೆಜಿ ತೂಕದ ಬೆಳ್ಳಿಯ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 13.52 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.