ಮಂಗಳೂರು: ಶಿವಮೊಗ್ಗದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದ ಬಗ್ಗೆ ಆಕ್ಷೇಪಾರ್ಹ ಬರಹವನ್ನು ಪೋಸ್ಟ್ ಮಾಡಿರುವ 'ಮಂಗಳೂರು ಮುಸ್ಲಿಂ ಪೇಜ್' ಖಾತೆಯನ್ನು ಅರಬ್ ರಾಷ್ಟ್ರದಲ್ಲಿದ್ದುಕೊಂಡು ನಿರ್ವಹಣೆ ಮಾಡಲಾಗುತ್ತಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದ್ದಾರೆ.
ಈ ಪ್ರಕರಣದ ಸಮಗ್ರ ತನಿಖೆಯನ್ನು ಕರ್ನಾಟಕ ಸಿಐಡಿ ವಹಿಸಿಕೊಂಡಿದೆ. ರಾಜ್ಯ ಇಂಟಲಿಜೆನ್ಸಿ ಸೇರಿದಂತೆ ವಿವಿಧ ತನಿಖಾ ತಂಡಗಳು ಸಮನ್ವಯ ಸಾಧಿಸಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿವೆ. ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕಾಗಿ ನಡೆದ ಜಗಳ, ಬುದ್ದಿ ಹೇಳಲು ಹೋದವರ ಮೇಲೆ ಹಲ್ಲೆ
2016ರಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಹಾಗೂ ಮತ್ತೊಬ್ಬ ದೇವಿಯ ಬಗ್ಗೆ ಮಂಗಳೂರು ಮುಸ್ಲಿಂ ಪೇಜ್ನಲ್ಲಿ ಅವಹೇಳನಕಾರಿ ಬರಹ ಪೋಸ್ಟ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಹಾಗೂ ಬೆಂಗಳೂರಿನಲ್ಲಿ 2016ರಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿರುವ ಮಂಗಳೂರು ಪೊಲೀಸರು ಮುಂಬೈನಲ್ಲಿದ್ದ ಫೇಸ್ ಬುಕ್ ಕಚೇರಿಗೆ ತೆರಳಿ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ನ್ಯಾಯಾಲಯದ ಅನುಮತಿ ಪಡೆದು ಖಾತೆಯನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಪೊಲೀಸ್ ಕಮಿಷನರ್ ಹೇಳಿದರು.